ಸತ್ಯ ದೇವ ಕೊಡಿ ಪ್ರಸಾದವ...

ನನ್ನ ತಾಯಿಯವರಿಂದ ಕಲಿತ, ಸತ್ಯನಾರಯಣ ಪೂಜೆಯ ಪ್ರಸಾದ ಪಡೆಯುವ ಸಂದರ್ಭದಲ್ಲಿ ಹಾಡುವಂತಹ ಹವ್ಯಕ ಗೀತೆ.....




ಸತ್ಯದೇವ ಕೊಡಿ ಪ್ರಸಾದವ| ಶಿರದಿ ಮೆರೆವ ಪತ್ರಪುಷ್ಪ ಭರಿತ ದ್ರವ್ಯವ||ಪ||

ಭುವನವಂದ್ಯ ನಿಮ್ಮ ಪಾದವ| ಅಜಸ್ರದೊಳಗೆ ಕವಲು ಮನವ ಬಿಟ್ಟು ಭಜಿಸುವ|
ಭುವನ ಜನರಿಗೊಲಿದು ದಯದಿ| ಭುವನ ಸಿಂಧುವನ್ನೆ ಜಗದಿ| ತವಕದಿಂದ ಸ್ಥಿರದಿ ರಾಜ ಭುವನಧೀಶ| ಸತ್ಯದೇವಾ||೧||

ಆದಿಭೂತ ವಿಶ್ವವಂದ್ಯನೇ| ಸುವರ್ಣಧ್ವಜನೆ ವೇದವೇದ್ಯ ದೇವದೇವನೆ|
ಮೇದಿನೀಶ ಧ್ರುವನಿಗೊಲಿದ| ಆದಿಮೂರ್ತಿ ವಿಶ್ವವಂದ್ಯ| ಪಾದನೆನೆವ ಭಕ್ತರಿಗೆ ಸಪಾದ ಭಕ್ಷ್ಯ ಸಹಿತ ಕೊಡುವ| ಸತ್ಯದೇವಾ||೨||

ನಾಗರಾಜ ವರದ ಕೇಶವ| ಸುರೇಶ ಪೂಜ್ಯ ಯೋಗಿ ಜನರ ನಿತ್ಯದೊಳು ಶಿವಾ|
ಭಾಗವತ ಜನಾದಿ ಮಿತ್ರ| ಯೋಗಿ ಜನರ ಶ್ರೀನಿವಾಸ| ಆಗ ಮುಕ್ತಿಯಿಂದ ಪೂಜೆ ಸಾಗಿಸುವ ಶ್ರೀಹರಿಯ ದಯದಿ| ಸತ್ಯದೇವಾ||೩||

ಕಡುದರಿದ್ರನಾದ ವಿಪ್ರಗೆ| ಕಟಾಕ್ಷತೋರಿ| ನುಡಿಯೆ ಸತ್ಯವ್ರತವ ನಾಥಗೆ|
ಒಡನೆ ಭಕ್ತಿಯಿಂದ ಮೂಡೆ ಅಡಗಿಸುವ ಕಷ್ಟವೆಲ್ಲ ಕೆಡಿಸಿ ಸಿರಿಸಂಪನ್ನನಾಗಿ ಕಡೆಗೆ ಮುಕ್ತಿ ಕರುಣಿಸಿದ|
ಸತ್ಯದೇವಾ||೪||

ಸಾಧುವೆಂಬ ವೈಶ್ಯಪೂರ್ವದಿ| ಮುರಾರಿ ನಿನ್ನ| ಪಾದಕಮಲ ಮರೆತು ಗರ್ವದಿ| 
ಆದಿಯೊಳಗೆ ಸೆರೆಯ ಸಿಲುಕಿ ಮೇದಿನಿಯೊಳು ದುಃಖಪಡುತ ಮಾಧವಾ ನೀ ರಕ್ಷಿಸೆನಲು ಬೇಧವಿಡದೆ ಕಾಯ್ದ ಹರಿಯೆ| ಸತ್ಯದೇವಾ||೫||

ಕರದಿ ಶಂಖ ಚಕ್ರ ಪದ್ಮವು| ಗದೆಯು ಸಹಿತ ಧರಿಸಿ ಮೆರೆವ ಭಕ್ತಿರಿಷ್ಟವು|
ಕರುಣಿಸುವ ಮುರಾರಿ ನಿನ್ನ ಚರಣನಿಂದ್ಯ ಕುಲಕುಟಾರ| ಕೊರಳ ವೈಜಯಂತೀ ಮಾಲೆ ಧರಿಸಿ ಮೆರೆವ ಹರಿಯ ದಯದಿ| ಸತ್ಯದೇವಾ||೬||

ಗೋಪಗಣರ ಸತ್ಯವ್ರತವನು| ಮನ್ನಿಸಿರದೆ ಭೂಪ ಪೋಗಲವನಸಿರಿಯನು|
ಕೋಪದಿಂದ ನಾಶಿಸಲ್ಕೆ ಭೂಪ ಮನದಿ ನೆನೆಯುತಾಗ| ಶ್ರೀಪತೀಯ ವ್ರತವನೆಸಗೆ ಶ್ರೀಪಿನಾಕಿ ಸಖನೆ ದಯದಿ| ಸತ್ಯದೇವಾ||೭||

ತ್ರಿದಶವಂದ್ಯ ರಾಮಚಂದ್ರನೇ| ಕಂಸಾರಿಯಾದ ಮಧುವಿನಾಶ ಕೃಷ್ಣದೇವನೇ|
ಚದುರಬೌದ್ಧ ಕಲ್ಕ್ಯಮೂರ್ತಿ ಯದುಕುಲಾಬ್ಧಿ ಲಕ್ಷ್ಮೀ ಹರಿಯೆ| ಮುದದಿ ರಕ್ಷಿಸಯ್ಯ ದೇವಾ ಯದುಪತಿಯೆ ನಿರತ ದಯದಿ| ಸತ್ಯದೇವಾ||೮||

                                         ------------------------------

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ