ಸ್ನೇಹ

ಸ್ನೇಹವೆಂಬುದು ಬಹಳ ಅಮೂಲ್ಯವಾದುದು, ಚಿರಂತನವಾದುದು. ಸ್ನೇಹಕ್ಕೆ ಯಾರೂ ಬೆಲೆ ಕಟ್ಟಲಾಗದು. ಎಲ್ಲರಿಗೂ ಎಲ್ಲರೊಂದಿಗೂ ಸ್ನೇಹ ಬೆಳೆಯಲು ಸಾಧ್ಯವಿಲ್ಲ. ಇಬ್ಬರು ಸಮಾನ ಭಾವನೆಗಳುಳ್ಳ ವ್ಯಕ್ತಿಗಳ ನಡುವೆ ಸ್ನೇಹ ಏರ್ಪಡುತ್ತದೆ. ಮೊಳೆತ ಸ್ನೇಹವನ್ನು ಕೊನೆತನಕ ಕಾಪಾಡಿಕೊಂಡು ಹೋಗುವುದು ಬಲು ಮುಖ್ಯ. 

ಸ್ನೇಹದಲ್ಲಿ ಎರಡು ವಿಧ. ಸ್ವಾರ್ಥಪರ ಸ್ನೇಹ, ನಿಸ್ವಾರ್ಥ ಸ್ನೇಹ. ಸ್ವಾರ್ಥಿಗಳಾದವರು ತಮ್ಮ ಕಾರ್ಯಸಾಧನೆಗೋಸ್ಕರ ಇತರರೊಂದಿಗೆ  ಸ್ನೇಹದಿಂದ ವರ್ತಿಸಿ ತಮ್ಮ ಕೆಲಸ ಮುಗಿಯುತ್ತಿದ್ದಂತೆ ಬೆನ್ನು ತೋರಿಸಿಬಿಡುತ್ತಾರೆ. ಆದರೆ ನಿಸ್ವಾರ್ಥಿಗಳು ಸದಾ ಜೊತೆಯಾಗಿದ್ದು, ಸ್ನೇಹಕ್ಕೋಸ್ಕರ ಪ್ರಾಣ ಕೊಡಲೂ ಸಿದ್ಧ ಎಂಬ ಮನೋಭಾವ ಹೊಂದಿರುತ್ತಾರೆ. ಅದಕ್ಕೆ ಬಲ್ಲವರು "ಆಪತ್ತಿಗಾದವನೇ ಗೆಳೆಯ" ಎಂಬ ನಾಣ್ಣುಡಿ ರಚಿಸಿದ್ದಾರೆ. ಕೈಯಲ್ಲಿ ಹಣವಿದ್ದಾಗ ಸಕ್ಕರೆಗೆ ಇರುವೆ ಮುತ್ತಿದಂತೆ ಹಿಂದೆ ಮುಂದೆ ಓಡಾಡುತ್ತಾ, ಸಂಕಷ್ಟಗಳಿಗೊಳಗಾದಾಗ ದೂರವಾಗುವವರು ಸ್ನೇಹಿತರಲ್ಲ. ಇವರನ್ನು ಸಮಯ ಸಾಧಕರು, ನಯವಂಚಕರು ಎನ್ನುತ್ತಾರೆ. ಆದ್ದರಿಂದ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರದಿಂದಿರಬೇಕು.

’ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬೊಂದು ಮಾತಿದೆ. ಎಂದರೆ ಸ್ನೇಹದಿಂದಿರುವಾಗ ಸಾಲ ಪಡೆದರೆ ನಂತರ ಅದೇ ವಿಷಯಕ್ಕಾಗಿ ಮನಸ್ತಾಪ ಮೂಡಿ ಸ್ನೇಹ ಕೆಡುತ್ತದೆ. ಇದಕ್ಕಾಗಿಯೇ ಬಲ್ಲವರು ಈ ಗಾದೆಯನ್ನು ರಚಿಸಿದ್ದಾರೆ. ಸ್ನೇಹವೆಂಬುದು ಬಹಳ ಬೆಲೆಬಾಳುವಂತಹುದು. ಇದಕ್ಕೆ ಬೆಲೆ ಕಟ್ಟಲಾಗದು. ಅಥವಾ ಇದನ್ನು ಹಣಕೊಟ್ಟು ಖರೀದಿಸಲೂ ಸಾಧ್ಯವಿಲ್ಲ. ಪರಸ್ಪರರ ನಡುವೆ ತ್ಯಾಗ ಮನೋಭಾವವಿದ್ದಾಗ ಮಾತ್ರ ಸ್ನೇಹವು ಬಲಗೊಳ್ಳುತ್ತದೆ.

ಸ್ನೇಹಿತರಿಲ್ಲದ ಬಾಳು ಬರಡು. ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಪ್ರತಿಯೊಬ್ಬರಿಗೂ ಸ್ನೇಹಿತರಿರಲೇಬೇಕು. ಇದರಿಂದ ಒಂಟಿತನ ಬಾಧಿಸುವುದಿಲ್ಲ. ಎಲ್ಲಿ ಸ್ನೇಹವಿರುವುದೋ ಅಲ್ಲಿ ಪ್ರೀತಿಯೂ ಇದ್ದೇ ಇರುತ್ತದೆ. ಹೀಗಾಗಿ ಸ್ನೇಹವೆಂಬುದು ಬಹಳ ಅದ್ಭುತವಾದುದು. ನಿಷ್ಕಲ್ಮಶವಾದ, ಕಳಂಕರಹಿತ ಸ್ನೇಹಕ್ಕೆ ಯಾರೂ ಬೆಲೆ ಕಟ್ಟಲಾಗದು. ಅದು ಅನನ್ಯವಾದುದು. "ಸ್ನೇಹಿತರ ನಡುವೆ ಕಡಿದು ಹೋಗದ ಸ್ನೇಹ, ಕಂಡೂ ಕಾಣದ ಮೋಹ ಇದ್ದಾಗ ಬಾಳು ಅದೆಷ್ಟು ಸೊಗಸು ಆಹಾ....." ಎಂಬಂತೆ ಸ್ನೇಹವು ಅಚಲವಾಗಿರಬೇಕೇ ವಿನಹ ಚಂಚಲತೆಗೆ ಒಳಗಾಗಬಾರದು.

ವಿದ್ಯೆ


ವಿದ್ಯೆಯು ಮನುಷ್ಯನಿಗೆ ಬಹಳ ಅವಶ್ಯಕ. ಏಕೆಂದರೆ ಆತನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುವುದೇ ವಿದ್ಯೆ. ’ವಿದ್ಯೆಯಿಲ್ಲದವ ಹದ್ದಿಗಿಂತ ಕಡೆ’ ಎಂಬಂತೆ ಅಕ್ಷರ ಜ್ನ್ಯಾನವಿಲ್ಲದವನು ಸಮಾಜದ ದ್ರುಷ್ಟಿಯಲ್ಲಿ ಪಶುವಿಗಿಂತ ಕಡೆಯಾಗಿ ಬಿಡುತ್ತಾನೆ. ವಿದ್ಯಾವಂತನಾದವನು ಎಲ್ಲೆಡೆಯಲ್ಲೂ ಗೌರವಾದರಗಳಿಗೆ ಪಾತ್ರನಾಗುತ್ತಾನೆ.

’ವಿದ್ಯಾ ದದಾತಿ ವಿನಯಂ’ ಎನ್ನುತ್ತಾರೆ. ಅಂದರೆ ವಿದ್ಯೆಯಿಂದ ವಿನಯವು ಪ್ರಾಪ್ತಿಯಾಗುತ್ತದೆ. ವಿದ್ಯೆಯು ಮಾನವನಿಗೆ ವಿನಯ, ಭಕ್ತಿ, ಶ್ರದ್ಧೆ ಸಂಯಮ ಎಲ್ಲವನ್ನು ಕಲಿಸುತ್ತದೆ. ತನ್ಮೂಲಕ ಆತನಿಗೆ ಅಪೂರ್ವ ಕಳೆಯನ್ನು ತುಂಬುತ್ತದೆ. ಇದಕ್ಕಾಗಿ ಸರ್ವಜ್ನ್ಯನು ಒಂದೆದೆ ನುಡಿದಿದ್ದಾನೆ: "ವಿದ್ಯೆಯುಳ್ಳವನ ಮುಖ ಮುದ್ದು ಬರುವಂತಿಕ್ಕು, ವಿದ್ಯೆಯಿಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ನ್ಯ" ಎಂಬುದಾಗಿ. ಎಂದರೆ ವಿದ್ಯೆಯುಳ್ಳವನ ಮುಖವು ಮುದ್ದು ಮುದ್ದಾಗಿ, ಸುಂದರವಾಗಿ ಕಾಣುವುದು. ಆದರೆ ವಿದ್ಯೆಯಿಲ್ಲದವನ ಮುಖವು ಹಾಳೂರ ಹದ್ದಿನಂತೆ ನೋಡಲು ಕೆಟ್ಟದಾಗಿರುವುದು ಎಂಬುದೇ ಇದರ ತಾತ್ಪರ್ಯ.

ಹಣ-ಒಡವೆಗಳನ್ನು ಕಳ್ಳ-ಕಾಕರು ಕದಿಯಬಲ್ಲರು. ಆದರೆ ವಿದ್ಯೆಯನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಅದು ಸದಾ ನಮ್ಮ ಜೊತೆಯಲ್ಲೇ ಇರುವುದು. ಅದರಲ್ಲಿ ಯಾರೂ ಪಾಲು ಕೇಳಲು ಸಾಧ್ಯವಿಲ್ಲ. ಆದ್ದರಿಂದ ’ಧನಕ್ಕಿಂತ ವಿದ್ಯೆ ಮೇಲು’ ಎಂಬುದಾಗಿ ಹಿರಿಯರು ನಾಣ್ಣುಡಿ ರಚಿಸಿದ್ದಾರೆ.

ವಿದ್ಯೆಯುಳ್ಳವನ ಬದುಕು ಹೂವಿನ ಹಾಸಿಗೆಯಂತೆ. ಏಕೆಂದರೆ ಅತ ಎಲ್ಲಿದ್ದರೂ ಉದರ ನಿರ್ವಹಣೆಗೆ ದಾರಿ ಕಂಡುಕೊಳ್ಳಬಲ್ಲನು. ವಿದ್ಯೆಯಿಂದ ಉದ್ಯೋಗ ಗಳಿಸಿ ಕೈ ತುಂಬಾ ಸಂಪಾದಿಸಬಲ್ಲನು. ಆದರೆ ವಿದ್ಯೆಯಿಲ್ಲದವನ ಬದುಕು ಮುಳ್ಳಿನ ಹಾಸಿಗೆಯಂತೆ, ಸದಾ ಕಷ್ಟ-ತೊಳಲಾಟ ತಪ್ಪಿದ್ದಲ್ಲ.

ವಿದ್ಯೆಯು ವ್ಯಕ್ತಿಯ ವರ್ಚಸ್ಸನ್ನು ವ್ರುದ್ಧಿಸುವುದು. ವಿವೇಕವನ್ನು ಹೆಚ್ಚಿಸುವುದು. ವಿವೇಚನಾ ಶಕ್ತಿಯನ್ನು ಇಮ್ಮಡಿಸುವುದು, ಸ್ವಾವಲಂಬಿಯಾಗಿಸುವುದು. ಆದರೆ ಅದನ್ನು ಪಡೆಯಬೆಕಾದರೆ ಸತತ ಪರಿಶ್ರಮ ಬೇಕು. ’ವಿದ್ಯೆ ಕಲಿಯುವುದು ಒಂದು ಕಲೆ, ವಿದ್ಯೆಯಿಲ್ಲದ ಮೇಲೆ ಬದುಕಿಗೇನಿದೆ ಬೆಲೆ?’ ಎಂಬಂತೆ ಇದನ್ನು ಕಲಿಯುವುದೂ ಒಂದು ರೀತಿಯ ಕಲೆ. ಈ ಕಲೆಯನ್ನು ಕರಗತಗೊಳಿಸಿಕೊಂಡರೆ ಬದುಕು ಸುಗಮ. ಇಲ್ಲವಾದಲ್ಲಿ ಬದುಕು ದುರ್ಗಮಗೊಳ್ಳುವುದು. ವಿದ್ಯೆಯಿಲ್ಲದವನ ಜೀವನ ನೀರಿಲ್ಲದ ನದಿಯಂತೆ, ಹಣ್ಣಿಲದ ಮರದಂತೆ, ಜೊಳ್ಳು-ಜೊಳ್ಳು. ಆದ್ದರಿಂದ ಗಂಡು-ಹೆಣ್ಣೆಂಬ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ವಿದ್ಯೆಯೆಂಬುದು ಅವಶ್ಯಕ, ಮಾತ್ರವಲ್ಲ ಅನಿವಾರ್ಯವೂ ಹೌದು.

copyrights2015geethabarlaamai

ಕಾಮೆಂಟ್‌ಗಳು