ಐತಿಹಾಸಿಕ ತಲಕಾಡು

ತಲಕಾಡು ಒಂದು ಚಾರಿತ್ರಿಕ ಹಿನ್ನಲೆಯುಳ್ಳ ಸ್ಥಳ. ಇಲ್ಲಿನ ದೇವಾಲಯಗಳಿಗೆ ಸುಮಾರು ಸಾವಿರದೈನೂರು ವರ್ಷಗಳ ಹಿಂದಿನ ಐತಿಹ್ಯವಿದೆ.

ಗಂಗರಸರು ಹಾಗೂ ಚೋಳರಸರ ಕಾಲದಲ್ಲಿ ತಲಕಾಡು ಹಲವಾರು ವರ್ಷಗಳ ಕಾಲ ಗಂಗರಸರ ರಾಜಧಾನಿಯಾಗಿತ್ತು. ಚೋಳರು ಇದನ್ನು ಗೆದ್ದುಕೊಂಡ ನಂತರ ಇದಕ್ಕೆ ’ರಾಜರಾಜಪುರ’ ಎಂಬ ಹೆಸರು ಬಂತು. ತದನಂತರ ಹೊಯ್ಸಳ ದೊರೆಯಾದ ವಿಷ್ಣುವರ್ಧನ ಇದನ್ನು ಗೆದ್ದುಕೊಂಡು ’ತಲಕಾಡುಗೊಂಡ’ ಎಂಬ ಕೀರ್ತಿಗೆ ಪಾತ್ರನಾದ. ನಂತರ ಮೈಸೂರು ಅರಸರು ಇದರ ಪೋಷಕರಾದರು.

ತಲಕಾಡಿನಲ್ಲಿ ವೈದ್ಯನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಕೀರ್ತಿನಾರಾಯಣ ಹಾಗೂ ಆನಂದೇಶ್ವರ ದೇವಾಲಯಗಳಿವೆ.

ಸಾವಿರದೈನೂರು ವರ್ಷಗಳ ಹಿಂದೆ ತಲಕಾಡು ಹೆಸರಿಗೆ ತಕ್ಕಂತೆ ಕಾಡುಪ್ರದೇಶಗಳಿಂದಲೇ ಕೂಡಿತ್ತು. ಅಲ್ಲಿ ವನ್ಯಮೃಗಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಋಷಿಮುನಿಗಳು ತಪಸ್ಸಿಗೆ ಆಗಮಿಸುತ್ತಿದ್ದರು. ಆಗ ಆನೆಗಳು ಮರವೊಂದರ ಕೆಳಗೆ ದೇವರ ಪೂಜೆಗೈಯುತ್ತಿದ್ದಾಗ ’ತಲ’ ಹಾಗೂ ’ಕಾಡ’ ಎಂಬ ಬೇಟೆಗಾರರಿಬ್ಬರು ಕೊಡಲಿಯನ್ನೆತ್ತಿ ಆ ಮರಕ್ಕೆ ಹೊಡೆಯುತ್ತಾರೆ. ತಕ್ಷಣ ಕೊಡಲಿಯೇಟು ತಗುಲಿ ಮರದ ಕೆಳಗಿನಿಂದ ಜಿಲ್ಲೆಂದು ರಕ್ತ ಜಿನುಗುತ್ತದೆ. ಬಗ್ಗಿ ನೋಡಿದ ಬೇಟೆಗಾರರಿಗೆ ಮರದ ಕೆಳಗೆ ಉದ್ಭವಿಸಿದ ಶಿವಲಿಂಗದಿಂದ ರಕ್ತ ಒಸರುತ್ತಿರುವುದು ಕಾಣಿಸುತ್ತದೆ. ತಕ್ಶಣ ಭಯದಿಂದ ಈರ್ವರೂ  ಶಿವನನ್ನು ಪ್ರಾರ್ಥಿಸಲು, ಪ್ರತ್ಯಕ್ಷನಾದ ಶಿವನು ಅವರಿಗೆ ಅಭಯ ನೀಡಿ ಬೂರುಗ ಮರದ ಎಲೆಗಳ ರಸ ತೆಗೆದು ಶಿವಲಿಂಗಕ್ಕೆ ಹಚ್ಚುವಂತೆ ಸೂಚಿಸುತ್ತಾನೆ ಮತ್ತು ಈ ಜಾಗವು ಇನ್ನು ಮೇಲೆ ನಿಮ್ಮ ನಾಮಗಳಿಂದಲೇ ಪ್ರಸಿದ್ಧವಾಗಲಿ ಎಂದು ನುಡಿದು ಅದೃಶ್ಯನಾಗುತ್ತಾನೆ. ಹೀಗೆ ಇಬ್ಬರು ಬೇಟೆಗಾರರ ಹೆಸರು ಸೇರಿ ಈ ಜಾಗವು ತಲಕಾಡು ಎಂಬುದಾಗಿ ಸುಪ್ರಸಿದ್ಧವಾಯಿತೆಂದೂ, ಶಿವನು ತನಗೆ ತಾನೇ ಔಷಧಿ ಸೂಚಿಸಿದ್ದರಿಂದ ಆ ಶಿವಲಿಂಗಕ್ಕೆ ’ವೈದ್ಯೇಶ್ವರ’ ಎಂದು ಹೆಸರು ಬಂದುದಲ್ಲದೆ ವೈದ್ಯನಾಥೇಶ್ವರ ದೇವಾಲಯವೂ ಸ್ಥಾಪನೆಯಾಯಿತೆಂದು ಪ್ರತೀತಿಯಿದೆ. ಹೀಗಾಗಿ ಈ ದೇವಾಲಯದ ಮುಂದೆ ತಲ ಹಾಗೂ ಕಾಡ ಎಂಬ ಇಬ್ಬರು ಬೇಟೆಗಾರರ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದೆ.

ಒಂದು ನಂಬಿಕೆಯ ಪ್ರಕಾರ ಇಲ್ಲಿನ ಪಾತಾಳೇಶ್ವರ ಶಿವಲಿಂಗವು ಬೆಳಗ್ಗೆ ಕೆಂಪಾಗಿ, ಮಧ್ಯಾಹ್ನ ಕಪ್ಪಾಗಿ, ಮತ್ತು ಸಂಜೆ ಬಿಳುಪಾಗಿ ಬಣ್ಣ ಬದಲಾಯಿಸುತ್ತದೆಂದೂ ಹೇಳಲಾಗುತ್ತಿದೆ. ವೈದ್ಯೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ ಹಾಗೂ ಮುಡುಕುತೊರೆಯ ಮಲ್ಲಿಕಾರ್ಜುನ ಇಲ್ಲಿನ ಪಂಚಲಿಂಗಗಳು. ಪ್ರತೀ ವರ್ಷ ಕಾರ್ತೀಕ ಮಾಸದಲ್ಲಿ ಭಕ್ತಾದಿಗಳು ಭಕ್ತಿಪರವಶರಾಗಿ ಬಂದು ಈ ಪಂಚಲಿಂಗಗಳ ದರ್ಶನಗೈದು ಪುನೀತರಾಗುತ್ತಾರೆ.

ತಲಕಾಡು ಪೂರ್ತಿ ಮರುಳಿನಿಂದ ಕೂಡಿದ ಪ್ರದೇಶವಾಗಿದ್ದು ಇದಕ್ಕೂ ಒಂದು ಇತಿಹಾಸವಿದೆ. ಅದೇನೆಂದರೆ ಅಲಮೇಲಮ್ಮನ ಶಾಪ. ಶ್ರೀರಂಗಪಟ್ಟಣದ ಆಡಳಿತಗರರಾಗಿದ್ದ ಶ್ರೀರಂಗರಾಯರಿಂದ ರಾಜ ಒಡೆಯರು ೧೬೧೦ರಲ್ಲಿ ಶ್ರೀರಂಗಪಟ್ಟಣವನ್ನು ಗೆದ್ದುಕೊಂಡರು. ಆಗ ಶ್ರೀರಂಗರಾಯರು ತಮ್ಮ ಪತ್ನಿ ಅಲಮೇಲಮ್ಮನೊಡನೆ ತಲಕಾಡಿಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಅಲಮೇಲಮ್ಮ ಶ್ರೀರಂಗಪಟ್ಟಣದ ಆದಿರಂಗ ದೇವಾಲಯದ ಒಡವೆಗಳನ್ನು ತನ್ನೊಂದಿಗೆ ಕೊಂಡೊಯುತ್ತಾಳೆ. ಅವುಗಳನ್ನು ತರಲು ರಾಜ ಒಡೆಯರು ಭಟರನ್ನು ಆಕೆಯ ಬಳಿಗೆ ಕಳುಹಿಸುತ್ತಾರೆ. ಇದನ್ನರಿತ ಅಲಮೇಲಮ್ಮ ತಿರುಮಕೂಡಲು ನರಸೀಪುರಕ್ಕೆ ಓಡುತ್ತಾಳೆ. ವಿಷಯವರಿತ ರಾಜಭಟರು ಅಲ್ಲಿಗೂ ಆಕೆಯನ್ನು ಹಿಂಬಾಲಿಸುತ್ತಾರೆ. ಇವರ ಕಾಟ ತಾಳದಾದಾಗ ಬೇಸರಗೊಂಡ ಅಲಮೇಲಮ್ಮ, "ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ ಹಾಗೂ ಮೈಸೂರು ಅರಸರಿಗೆ ಮಕ್ಕಳೇ ಆಗದಿರಲಿ" ಎಂದು ಶಾಪ ನೀಡಿ ಒಡವೆಗಳ ಸಮೇತ ಮಾಲಂಗಿ ನದಿಗೆ ಹಾರಿ ಪ್ರಾಣ ಕಳೆದುಕೊಳುತ್ತಾಳೆ ಎಂದು ಪ್ರತೀತಿ. ಕಾಕತಾಳೀಯವೋ ಎಂಬಂತೆ ಇಂದಿಗೂ ಹಾಗೆಯೇ ನಡೆದುಕೊಂಡು ಬಂದಿದೆ.


 ವೈದ್ಯನಾಥೇಶ್ವರ ದೇವಾಲಯದ ಬಲಭಾಗದಲ್ಲಿ ಶಿವಲಿಂಗ ಸ್ಥಾಪಿಸಿ ಮೇಲ್ಚ್ಃಆವಣಿ ಮೇಲೆ ನಂದಿ ವಿಗ್ರಹವನ್ನು ಸ್ಥಾಪನೆ ಮಾಡಲಾಗಿದೆ. ಗಂಗರಸರು ಕಾಶಿಗೆ ಹೋಗಿಬಂದ ಕುರುಹಾಗಿಅ ಅಲ್ಲಿಂದ ಶಿವಲಿಂಗವನ್ನು ಇಲ್ಲಿ ತಂದು ಪ್ರತಿಷ್ಟಾಪಿಸಿದ್ದಾರೆ ಎಂದೂ ಹೇಳಲಾಗುತ್ತದೆ. ದೇವಾಲಯದ ಮೇಲ್ಛಾವಣಿಗೆ ಹಾಸುಗಲ್ಲುಗಳನ್ನೇ ಬಳಸಲಾಗಿದೆ. ಮಾತ್ರವಿಲ್ಲದೆ ಕಲ್ಲಿನ ಕಂಬಗಳ ಮೇಲೆ ಕೆತ್ತಲಾದ ಪ್ರತಿಯೊಂದು ಕೆತ್ತನೆಗಳೂ  ಅದ್ಭುತವಾಗಿದ್ದು ಒಂದೊಂದು ಕೆತ್ತನೆಯೂ ಇತಿಹಾಸವನ್ನು ಸಾರುತ್ತದೆ. ಒಂದೆಡೆ ಸ್ವಾಮಿ ಅಯ್ಯಪ್ಪನ ಕೆತ್ತನೆಯನ್ನು ಮಾಡಲಾಗಿದ್ದು ಇದು ಅಂದಿನ ಕಾಲದಲ್ಲೇ ಕರ್ನಾಟಕದಲ್ಲಿ ಅಯ್ಯಪ್ಪನ ಬಗ್ಗೆ ಪ್ರಚಾರವಿತ್ತೆಂಬುದನ್ನು ಸಾರುತ್ತದೆ. ಇನ್ನೊಂದೆಡೆ ಉದರ ಹಾಗೂ ಎದೆಯ ಭಾಗದಲ್ಲಿ ವೃಷಭದ ಮುಖ ಹೊತ್ತ ವೃಷಭೇಶ್ವರನನ್ನು ಕಾಣಬಹುದು. ಇದು ಹಿಂದಿನ ಕಾಲದ ಶಿಲ್ಪಿಗಳ ಕೈಚಳಕಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗೆ ಹಲವಾರು ಕೆತ್ತನೆಗಳು ಇಲ್ಲಿ ನೋಡುಗರ ಮನ ಸೆಳೆಯುತ್ತದೆ. ಈ ರೀತಿ ತಲಕಾಡು ಒಂದು ಉತ್ತಮವಾದ ಪ್ರೇಕ್ಷಣೀಯ ಸ್ಥಳ.

ಕಾಮೆಂಟ್‌ಗಳು