
ಹಸಿರು ಸಿರಿಯ ಮಡಿಲಿನಿಂದ ಗಿರಿಶಿಖರಗಳ ಒಡಲಿನಿಂದ ಜುಳುಜುಳು ನಿನಾದಗೈಯುತ್ತಾ ಹರಿದು ಬರುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಜಲಪಾತವೆಂದರೆ ಜನರಿಗೆ ಇನ್ನಿಲ್ಲದ ಆಕರ್ಷಣೆ! ಅದರಲ್ಲೂ ಜಲಪಾತದ ಬಳಿ ನಿಂತು ಸೆಲ್ಫಿ ತೆಗೆಯುವುದೆಂದರೆ ಇನ್ನಿಲ್ಲದ ವ್ಯಾಮೋಹ. ಹಸಿರು ಬೆಟ್ಟಗಳ ನಡುವಿನಿಂದ ಹಾಲ್ನೊರೆಯಂತೆ ಉಕ್ಕಿ ’ಧೋ’ ಎಂದು ಧುಮ್ಮಿಕ್ಕುವ ಈ ಜಲಪಾತವೇ ಚಾಮಡ್ಕ ಜಲಪಾತ.
ಸುಳ್ಯದಿಂದ ಕುಕ್ಕುಜಡ್ಕಕ್ಕೆ ತೆರಳುವ ಬಸ್ಸಿನಲ್ಲಿ ಎರಡು ಕಿಲೋಮೀಟರ್ಗಳಷ್ಟು ಮುಂದೆ ಸಾಗಿದಾಗ ರಸ್ತೆಯು ಕವಲು ಪಡೆಯುತ್ತದೆ. ಎಡರಸ್ತೆ ಬೆಳ್ಳಾರೆ ಕಡೆಗೆ, ಬಲರಸ್ತೆ ಚೊಕ್ಕಾಡಿ ಕಡೆಗೆ ಸಾಗುತ್ತದೆ. ಈ ಚೊಕ್ಕಾಡಿ ರಸ್ತೆಯಲ್ಲೇ ಐದಾರು ಕಿಲೋಮೀಟರ್ಗಳಷ್ಟು ಮುಂದೆ ಸಾಗಿದರೆ ಕುಕ್ಕುಜಡ್ಕ ಸಿಗುತ್ತದೆ. ಇಲ್ಲಿಂದ ಮುಂದಕ್ಕೆ ಬಸ್ ಸೌಲಭ್ಯವಿಲ್ಲ. ಸ್ವಂತ ವಾಹನ ಅಥವಾ ಕಾಲ್ನಡಿಗೆ ಮೂಲಕ ಸಾಗಬೇಕು. ಜೀಪ್ ಅಥವಾ ಕಾರಿನಲ್ಲಿ ತೆರಳಿದರೆ ಸುಲಭ. ಎರಡು ಕಿಲೋಮೀಟರ್ಗಳಷ್ಟು ಮುಂದೆ ಸಾಗಿದರೆ ರಸ್ತೆಯ ಬಲಬದಿಗೆ ಕಣ್ಮನ ಸೆಳೆಯುವ ಚಾಮಡ್ಕ ಜಲಪಾತ ವೀಕ್ಷಕರನ್ನು ಸ್ವಾಗತಿಸುತ್ತದೆ.

ಹೆಬ್ಬಂಡೆಗಳ ನಡುವೆ ರುದ್ರನರ್ತನಗೈಯುತ್ತಾ ಭೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಪಾತದ ಬುಡಕ್ಕೆ ನಡೆದು ಸಾಗಲು ಸರಿಯಾದ ದಾರಿಯಿಲ್ಲ. ಮಿತ್ತಮಜಲು ಮಹಾಬಲೇಶ್ವರ ಭಟ್ಟರ ಮನೆಯಂಗಳದಲ್ಲಿನ ತೋಟದ ಮುಂದೆ ಸಾಗಿ ಜಲಪಾತದ ಬಳಿಗೆ ತೆರಳಬೇಕು. ಇಕ್ಕೆಲಗಳಲ್ಲಿ ಅಡಿಕೆತೋಟ. ತೋಟಗಳ ನಡುವೆ ಹಾದುಹೋಗುವ ಚಾಮಡ್ಕ ಜಲಪಾತದ ಸೊಬಗನ್ನು ನೋಡಿಯೇ ಸವಿಯಬೇಕು. ನೀರಿನ ಜುಳುಜುಳು ಸದ್ದು ಕಿವಿಗೆ ಇಂಪಾಗಿ ಕೇಳುತ್ತಿದ್ದರೆ ಪಾದಗಳಲ್ಲಿ ’ಉಂಬ್ಳಿ’ ಎಂಬ ಹುಳುವು ನರ್ತಿಸುತ್ತಾ ರಕ್ತ ಹೀರುವುದನ್ನು ಕಂಡು ದಂಗಾಗುವ ಸರದಿ ಕೆಲವರದ್ದು.ಈ ’ಉಂಬ್ಳಿ’ ಇಲ್ಲಿನ ತೋಟಗಳಲ್ಲಿ ಬಹಳಷ್ಟು ಕಾಣಸಿಗುತ್ತವೆ. ಆದ್ದರಿಂದ ಮೈಯೆಲ್ಲಾ ಕಣ್ಣಾಗಿರಬೇಕು.

ಬೆಟ್ಟಗಳ ನಡುವಿಂದ ಹರಿದು ಬರುವ ಉರುಂಬಿ ನದಿ, ಆನೆಕ್ಕಾರು ನದಿ, ಚಾಮಡ್ಕ ನದಿ..... ಹೀಗೇ ವಿವಿಧ ಪುಟ್ಟ-ಪುಟ್ಟ ನದಿಗಳು ಒಂದೆಡೆ ಸೇರಿ ಚಾಮಡ್ಕ ಜಲಪಾತ ರೂಪುಗೊಳ್ಳುತ್ತದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಚಾಮಡ್ಕ ಜಲಪಾತವು ಜನಮನವನ್ನು ಸೂರೆಗೊಳ್ಳುತ್ತದೆ. ಜುಲೈನಿಂದ ನವೆಂಬರ್ ತನಕ ಇದನ್ನು ನೋಡಲು ಸಕಾಲ. ಬೇಸಿಗೆಯಲ್ಲಿ ನೀರಿನ ಹರಿವು ಕಮ್ಮಿಯಾಗುವುದರಿಂದ ಅಂದವೂ ಕಮ್ಮಿಯಾಗುತ್ತದೆ. ಚಾಮಡ್ಕ ಜಲಪಾತದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿಗೆ ವೀಕ್ಷಣೆಗೆ ಬರುವವರು ಊಟ-ತಿಂಡಿ ತಯಾರಿಸಿ ತರುವುದು ಸೂಕ್ತ. ಇಲ್ಲಿ ಯಾವುದೇ ರೀತಿಯ ವನ್ಯ ಪ್ರಾಣಿಗಳ ಭಯವಿಲ್ಲ. ಆದರೆ ಮಳೆಗಾಲದಲ್ಲಿ ಬಂಡೆ ಕಲ್ಲುಗಳು ಪಾಚಿ ಕಟ್ಟಿ ಜಾರುತ್ತವೆ. ಇವುಗಳ ಮೇಲೆ ಕಾಲೂರಿ ನಡೆಯುವುದು ಅಸಾಧ್ಯ. ಹೀಗಾಗಿ ವೀಕ್ಷಣೆಗೆ ಬರುವವರು ಬಹಳ ಎಚ್ಚರದಿಂದ ಸಾಗಬೇಕು. ಜಲಪಾತದ ಅಂದವನ್ನು ಸವಿಯುವುದೆಂದರೆ ಯಾರಿಗೆ ತನೇ ಇಷ್ಟವಾಗುವುದಿಲ್ಲ. ಆದ್ದರಿಂದ ಸುಳ್ಯದ ಕಡೆಗೆ ಬಂದಾಗ ಚಾಮಡ್ಕ ಜಲಪಾತ ನೋಡಲು ಮರೆಯದಿರಿ!
copyrightsgeethabarlaamai2016
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ