ತುಳುನಾಡಿನಲ್ಲಿ ಭೂತಾರಾಧನೆಗೆ ತನ್ನದೇ ಆದ ವೈಶಿಷ್ಟ್ಯತೆಯಿದೆ. ತುಳುನಾಡ ಜನರು ತಮ್ಮ ಕಷ್ಟ ಪರಿಹಾರಕ್ಕಾಗಿ ಭೂತ ದೈವಗಳನ್ನು ಆರಾಧಿಸುತ್ತಾರೆ. ರಕ್ತೇಶ್ವರಿ, ಗುಳಿಗ, ಪಂಜುರ್ಳಿ, ಧೂಮಾವತಿ, ಕಲ್ಕುಡ, ವಿಷ್ಣುಮೂರ್ತಿ..... ಹೀಗೆ ವಿವಿಧ ನಾಮಗಳಿಂದ ಖ್ಯಾತಿವೆತ್ತ ದೈವಗಳನ್ನು ಇಲ್ಲಿ ಆರಾಧಿಸಲಾಗುತ್ತದೆ.
ಸಾಮಾನ್ಯವಾಗಿ ಇಲ್ಲಿನ ಭೂತದ ವೇಷ-ಭೂಶಣಗಳಿಗೂ ಯಕ್ಷಗಾನ ಪಾತ್ರದಾರಿಯ ವೇಷ-ಭೂಷಣೆಗಳಿಗೂ ಸಾಮ್ಯತೆಯಿದೆ. ಮುಖಕ್ಕೆ ವಿವಿಧ ರೀತಿಯ ಬಣ್ಣ ಹಚ್ಚಿ ಕಂಗಳ ಸುತ್ತ ದಪ್ಪನೆಯ ಕಪ್ಪು ಕಾಡಿಗೆಯಿಂದ ತೀಡಿ ತಲೆಗೆ ಕಿರೀಟ ತೊಟ್ಟು ಭೂತದ ಮುಖವಾಡ ತೊಟ್ಟು ಹಸಿ ತೆಂಗಿನ ಗರಿಗಳನ್ನು ತಲೆ ಮತ್ತು ಶರೀರಕ್ಕೆ ಸುತ್ತಿಕೊಂಡು ಭಯಾನಕವಾಗಿ ಕಾಣುವ ಈ ಭೂತ ವೇಷ ಮೊದಲ ನೋಟಕ್ಕೆ ನೋಡುವವರ ಗುಂಡಿಗೆಯನ್ನು ಅಲುಗಾಡಿಸದಿರದು. ಬೇರೆ ಬೇರೆ ಬಯಲಿನಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ದೈವವನ್ನು ಬಯಲಿನ ಭೂತವೆಂದು ಬಯಲಿನ ಜನರೆಲ್ಲಾ ಜೊತೆಗೂಡಿ ಪೂಜಿಸುತ್ತಾರೆ. ಇದರಿಂದ ಆ ಬಯಲಿನ ಜನತೆಯ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆಯೆಂದೂ ಆ ಪ್ರದೇಶದ ಜನರನ್ನು ದೈವವು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತದೆಯೆಂಬುದು ಜನರ ನಂಬಿಕೆ. ಅದೇ ರೀತಿಯ ಭೂತಾರಾದನೆಯ ಜಲಕ್ ಒಂದು ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈ ಎಂಬಲ್ಲಿ ಊರ ಸಮಸ್ತರೆದುರು ನಡೆದ ಗುಳಿಗ- ರಕ್ತೇಶ್ವರಿ ಭೂತಾರಾದನೆಯ ಸಚಿತ್ರ ಲೇಖನವಿದು.
ತುಳುನಾಡ ಆರಧ್ಯದೈವ ರಕ್ತೇಶ್ವರಿ. ಈ ಭೂತಾರಾಧನೆಯು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲೇ ಜರುಗುತ್ತದೆ. ಮೊದಲಿಗೆ ಕರ್ತ್ರುಗಳೂ, ಊರ ಸಮಸ್ತರೂ ಸೇರಿ ಭೂತ ಕಟ್ಟುವವರಿಗೆ ಎಣ್ಣೆ ಕೊಡುವ ಶಾಸ್ತ್ರ. ನಂತರ ಭೂತ ಭಂಡಾರವನ್ನು ತರುತ್ತಾರೆ. ಆಗ ಬೆಳ್ಚಪ್ಪಾಡ (ಎಂದರೆ ಭೂತದ ಸಹಾಯಕ)ರಿಗೆ ಭೂತದ ಕತ್ತಿ ಹಿಡಿಯಲು ದರುಶನ ಉಂಟಾಗುತ್ತದೆ.
ಆಗ ಪಕ್ಕದಲ್ಲಿ ದೊಡ್ಡದಾದ ಬೆಂಕಿಯ ಕುಂಡವನ್ನು ಸಹಾಯಕರು ತಯಾರಿಸುತ್ತಾರೆ. ತನ್ನ ನೆಚ್ಚಿನ ಒಡೆಯನಾದ ಅಡೂರು ದೇವನನ್ನು ನೆನೆಸುತ್ತಾ ಭೂತವು ಬೆಂಕಿಯ ಕೆಂಡದ ಮೇಲೆ ಓಡಾಡುತ್ತದೆ. ಆಗ ಸಹಾಯಕರು ಕೈಹಿಡಿದು ಭೂತವನ್ನು ಬದಿಗೆ ಕರೆತರುತ್ತಾರೆ. ನಂತರ ಅಲ್ಲಿ ಸೇರಿದ ಭಕ್ತ ಸಮೂಹವನ್ನೂ ಕೆಂಡದ ಮೇಲೆ ಓಡಲು ಆಹ್ವಾನಿಸುತ್ತದೆ. ಆಗ ಭಕ್ತರೆಲ್ಲಾ ಒಬ್ಬೊಬ್ಬರಾಗಿ ಬಂದು ಭೂತದ ಕೈ ಹಿಡಿದುಕೊಂಡು ಕೆಂಡದ ಮೇಲೆ ನಡೆಯುತ್ತಾರೆ.
ಹೀಗೆ ಮಾಡಿದರೆ ತಾಯಿ ರಕ್ತೇಶ್ವರಿಯು ಎಲ್ಲಾ ಸಂಕಷ್ಟಗಳನ್ನೂ ಪರಿಹರಿಸಿ ಕಾಪಾಡುತ್ತಳೆಂದು ಭಕ್ತರ ನಂಬಿಕೆ. ಆದ್ದರಿಂದ ಭಕ್ತಾದಿಗಳೆಲ್ಲಾ ಆ ತಾಯಿಯನ್ನು ನೆನೆಯುತ್ತಾ ಮುನ್ನುಗ್ಗುತ್ತಾರೆ. ಇದಾದ ನಂತರ ಸೇರಿದವರಿಗೆಲ್ಲಾ ಭೂತ ಬೊಂಡ(ಎಳನೀರು) ನೀಡುತ್ತದೆ. ನಂತರ ಪ್ರಸಾದ ವಿತರಣೆ.
ಕೊನೆಗೆ ಭೂತವು ಕರ್ತ್ರುಗಳ ಮನೆಗೆ ತೆರಳಿ ಹಾಲು ಕುಡಿದು ಸ್ವಲ್ಪ ಹಾಲನ್ನು ಮನೆಯವರಿಗೆ ಪ್ರಸಾದವಾಗಿ ನೀಡುತ್ತದೆ. ಆ ಹಾಲಿನಲ್ಲಿ ತಾಯಿಯ ಕ್ರುಪೆಯೂ ತುಂಬಿರುತ್ತದೆಯಾದ್ದರಿಂದ ಎಲ್ಲರೂ ಅದನ್ನು ಸ್ವೀಕರಿಸುತ್ತಾರೆ.
ಇದು ಊರವರನ್ನೆಲ್ಲಾ ಕಾಪಾಡುತ್ತದೆಂಬುದು ಜನರ ನಂಬಿಕೆ. ಈ ಭೂತಾರಾದನೆಯು ತುಳುನಾಡ ಒಂದು ಸಂಸ್ಕ್ರುತಿಗೆ ಹಿಡಿದ ಕನ್ನಡಿ.
○copyrights2015geethabarlaamai
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ