ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ

ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಪ್ರಖ್ಯಾತ ಕ್ಷೇತ್ರಗಳಲ್ಲಿ ಶ್ರೀಮಧೂರು ಕ್ಷೇತ್ರವೂ ಒಂದು. ದಿನೇ ದಿನೇ 

ಅಡೂರೂ, ಮಧೂರು, ಕಾವು, ಕಣ್ಯಾರಗಳೆಂಬ ನಾಲ್ಕು ದೇವಾಲಯಗಳು ಕುಂಬಳೆ ಸೀಮೆಯ ಅರಸರಾದ ಮಾಯಿಪ್ಪಾಡಿ ರಾಜಮನೆತನಕ್ಕೆ ಒಳಪಟ್ಟ ಆರಾಧನಾ ಸ್ಥಳಗಳು. ಅಡೂರು, ಮಧೂರು ಶೈವ ಕ್ಷೇತ್ರಗಳಾದರೆ ಕಾವು, ಕಣಿಯಾರ ವೈಷ್ಣವ ಕ್ಷೇತ್ರಗಳು.

ಕಾಸರಗೋಡು ನಗರದಿಂದ ಏಳು ಕಿಲೋಮೀಟರ್ ಈಶಾನ್ಯಕ್ಕೆ ಮಧೂರು ಗ್ರಾಮವಿದೆ. ಸುತ್ತಲೂ ಎತ್ತರವಾದ ಬೆಟ್ಟ-ಗುಡ್ಡಗಳು, ತಪ್ಪಲಲ್ಲಿ ತೆಂಗು, ಅಡಿಕೆ, ಬಾಳೆಯ ತೋಟ, ಬಯಲಿನ ಮಧ್ಯದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಕಲ ಕಲ ನಾದ ಮಾಡುತ್ತಾ  ಹರಿಯುವ ಮಧುವಾಹಿನೀ ನದಿಯದೆ. ನದಿ ದಡದಲ್ಲಿ ಪೂರ್ವಾಭಿಮುಖವಾಗಿ ಶೋಭಿಸುವ ಶ್ರೀ ಮದನಂತೇಶ್ವರ ವಿನಾಯಕನ ಮಂದಿರ. ಮೂರಂತಸ್ತಿನ ಈ ದೇವಾಲಯದ ಸುತ್ತಲೂ ಇರುವ ವಿವಿಧ ಕೆತ್ತನೆಗಳ ಗೋಪುರ ಹಾಗೂ ಉಪದೇವಾಲಯಗಳು ಭಕ್ತರ ಮನಸ್ಸಿಗೆ ಮುದ ನೀಡುತ್ತವೆ. ದೇವಾಲಯದ ಪಶ್ಚಿಮದಲ್ಲಿ ಒಂದು ಚಿಕ್ಕ ಗೋಪುರ. ಇದರ ಹೆಬ್ಬಾಗಿಲನ್ನು ದಾಟಿ ಪ್ರದಕ್ಷಿಣೆಯಾಗಿ ಮುಂಭಾಗಕ್ಕೆ ಬಂದಾಗ ಮಧುವಾಹಿನೀ ನದಿಯು ನಮ್ಮನ್ನ್ನು ಸ್ವಾಗತಿಸುತ್ತದೆ. ಇಲ್ಲಿ ಕೈ-ಕಾಲು ತೊಳೆದು ಬರುವಾಗ ಅರಳೀಮರವು ನೆರಳನ್ನಿತ್ತು ತಂಪನ್ನೀಯುತ್ತದೆ.

ಮೂಡಗೋಪುರದ ಮಹಾದ್ವಾರದ ಮೂಲಕ ಒಳಗೆ ಪ್ರವೇಶಿಸಿದಾಗ ಎತ್ತರದ ಧ್ವಜಸ್ತಂಭ (ಕೊಡಿಮರ) ಕಾಣಿಸುತ್ತದೆ. ಮುಂದೆ ಹೋದಾಗ ಕಾಶಿ ವಿಶ್ವನಾಥನ ಗುಡಿಯಿದೆ. ಹಿಂದೆ ಕುಂಬಳೆ ಅರಸರು ಕಾಶೀಯಾತ್ರೆ ಮಾಡಿ ಬಂದ ನೆನಪಿಗಾಗಿ ಶಿವಲಿಂಗವನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿದರೆಂದು ಹೇಳಲಾಗುತ್ತದೆ. ಮುಂದೆ ಹೋದಂತೆ ಶ್ರೀ ಶಾಸ್ತಾರ ಗುಡಿ, ಶ್ರೀ ಸುಬ್ರಹ್ಮಣ್ಯನ ಗುಡಿ, ಶ್ರೀ ದುರ್ಗಾ ಗುಡಿಗಳು ಕಾಣಸಿಗುತ್ತವೆ. ಸನಿಹದಲ್ಲೇ ನಾದಮಂಟಪ ಹಾಗೂ ನಮಸ್ಕಾರ ಮಂಟಪಗಳಿವೆ. ಅದರ ಬಳಿ ಸದಾ ಜ್ವಲಿಸುವ ಅಗ್ನಿಯೊಂದಿಗೆ ಹೊಗೆಯಾಡುವ ಗಣಹೋಮದ ಕುಂಡವಿರುವ ಯಾಗ ಮಂಟಪವಿದೆ. ಸಮೀಪದಲ್ಲಿ ಚಿಕ್ಕದೊಂದು ಮುಖಮಂಟಪ. ಅಲ್ಲಿ ನಿಂತು ಉತ್ತರಕ್ಕೆ ಮುಖ ಮಾಡಿ ಕಿಟಕಿ ಮೂಲಕ ವೀಕ್ಷಿಸಿದರೆ ಶ್ರೀ ಸಿದ್ಧಿವಿನಾಯಕನ ದರ್ಶನವಾಗುತ್ತದೆ. ಈತನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಜನರ ಅಭೀಷ್ಟ ಈಡೇರುತ್ತದೆ.

ಸ್ಥಳ ಇತಿಹಾಸ

ಮಧೂರು ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಮಧೂರು ಕ್ಷೇತ್ರದಿಂದ ಒಂದೂವರೆ ಕಿಲೋಮೀಟರ್ ನೈರುತ್ಯಕ್ಕೆ ಪೊದರು ಬಳ್ಳಿ, ಗಿಡ, ಮರಗಳಿಂದ ಕೂಡಿದ ಪ್ರದೇಶವಿತ್ತಂತೆ. ಅಲ್ಲಿ ಒಮ್ಮೆ ’ಮದರು’ ಎಂಬ ಸ್ತ್ರೀಯೋರ್ವಳು ಸೊಪ್ಪು ಹೆರೆಯುತ್ತಿದ್ದಾಗ ಆಕೆಯ ಕತ್ತಿಯು ಶಿಲೆಯೊಂದಕ್ಕೆ ತಗುಲಿ ರಕ್ತವು ಒಸರಲಾರಂಭಿಸಿತಂತೆ. ಅದನ್ನು ಕಂಡು ಅಕೆ ಗಾಬರಿಯಿಂದ ತನ್ನ ಪಂಗಡದವರಿಗೆ ವಿಷಯ ಅರುಹಲು ಅವರೆಲ್ಲಾ ಒಂದಾಗಿ ಹೋಗಿ ಸೀಮೆಯ ಅರಸರಿಗೆ ಸುದ್ದಿ ಮುಟ್ಟಿಸಿದರು. ಆಗ ಆ ಸ್ಥಳಕ್ಕೆ ತಮ್ಮ ಪರಿವಾರ ಸಮೇತ ಆಗಮಿಸಿದ ಅರಸರು ಆ ವೈಚಿತ್ರ್ಯವನ್ನು ಕಂಡು ಅಚ್ಚರಿಗೊಂಡು ಮನದಲ್ಲಿ ದೇವರೊಡನೆ ’ಜಲಾಶಯವಿರುವ ಪ್ರಶಸ್ತ ಜಾಗದಲ್ಲಿ ವಿಗ್ರಹ ಕಾಣಿಸಿಕೊಂಡರೆ ಅಲ್ಲಿ ಮಂದಿರ ನಿರ್ಮಾಣ ಮಾಡಲು ಹರಸಿಕೊಂಡರು’. ಆಗ ವಿಗ್ರಹವು ಮಧುವಾಹಿನೀ ನದಿ ತಟದಲ್ಲಿ ಕಾಣಿಸಿಕೊಳ್ಳಲು ಅದುವೇ ಯೋಗ್ಯವಾದ ಸ್ಥಳವೆಂದು ಅಲ್ಲಿ ದೇವಾಲಯ ನಿರ್ಮಿಸಿದರೆಂದು ಪ್ರತೀತಿ. ಹೀಗೆ ಮದರು ಎಂಬ ಸ್ತ್ರೀಗೆ ವಿಗ್ರಹವು ಕಾಣಿಸಿಕೊಂಡಿದ್ದರಿಂದ ಈ ಸ್ಥಳವು ’ಮಧೂರು’ ಎಂದು ಖ್ಯಾತನಾಮವಾಯಿತೆಂದು ಹೇಳಲಾಗುತ್ತದೆ.

ಮಧೂರು ಸಿದ್ಧಿವಿನಾಯಕನ ವಿಶೇಷತೆಯೆಂದರೆ ಸೊಂಡಿಲು ಬಲಕ್ಕೆ ಬಾಗಿದ್ದು, ’ಬಲಮುರಿ ಗಣಪತಿ’ ಎಂದೇ ಪ್ರಸಿದ್ಧವಾದ ಇಂತಹ ವಿಗ್ರಹ ತುಂಬಾ ಅಪರೂಪ. ಇಂತಹ ಗಣಪತಿ ತುಂಬಾ ಪ್ರಭಾವಶಾಲಿಯೆಂದು ಹೇಳಲಾಗುತ್ತದೆ.  ಪ್ರಭಾವಶಾಲಿಯೆಂಬುದಕ್ಕೆ ಒಂದು ಉದಾಹರಣೆ ಹೀಗಿದೆ.  ಕ್ರಿ.ಶ.೧೭೮೪ರಲ್ಲಿ ಟಿಪ್ಪು ಸುಲ್ತಾನನು ಕುಂಬಳೆ ಸೀಮೆಗೆ ದಾಳಿ ಮಾಡುತ್ತಾ ಮಧೂರಿಗೂ ಬಂದು ದೇವಾಲಯದ ಗೋಪುರ ಹಾಗೂ ಒಳಗಿನ ಗುಡಿಗಳನ್ನು ಕೆಡವಲಾರಂಭಿಸಿದಾಗ ಬಾಯಾರಿಕೆ ತಾಳಲಾರದೆ ಅಲ್ಲಿದ್ದ ಬಾವಿಯಿಂದ ನೀರು ಸೇದಿ ಕುಡಿದನಂತೆ. ಅದರಿಂದ ಮನಃ ಪರಿವರ್ತನೆ ಹೊಂದಿ ದಾಳಿಯನ್ನು ಅರ್ಧಕ್ಕೆ ನಿಲ್ಲಿಸಿ ಹಿಂದಕ್ಕೆ ತೆರಳಿದನಂತೆ. ಈ ದೇವಾಲಯದ ಪ್ರಧಾನ ಗರ್ಭಗುಡಿಯಲ್ಲಿ ಶ್ರೀ ಮದನಂತೇಶ್ವರನಿದ್ದರೂ ಉತ್ತರ ದಿಕ್ಕಿನ ಗೋಡೆಬದಿಯಲ್ಲಿ ದಕ್ಷಿಣ ಮುಖವಾಗಿ ಆವಿರ್ಭವಿಸಿದ ಶ್ರೀ ಸಿದ್ಧಿವಿನಾಯಕನ ಪ್ರಭಾವವೇ ಇಲ್ಲಿ ಅಧಿಕ. ಈತನ ಶಕ್ತಿ ಅಪಾರವಾಗಿದ್ದು ನಂಬಿದ ಜನರ ಬೇಡಿಕೆ ಬಹುಬೇಗ ಈಡೇರುತ್ತದೆ. ಹೀಗಾಗಿ ಭಕ್ತಾದಿಗಳು ಇಲ್ಲಿಗೆ ಹೆಚ್ಚಿನ ಸಂಖೆಯಲ್ಲಿ ಆಗಮಿಸುತ್ತಾರೆ.

ಮೂಡಪ್ಪ ಸೇವೆಯು ಇಲ್ಲಿನ ಅಪೂರ್ವವಾದ ಸೇವೆ. ೧೭೯೫, ೧೭೯೭, ೧೯೬೨ ಹಾಗೂ ೧೯೯೨ರಲ್ಲಿ ಇಲ್ಲಿ ಅತ್ಯಂತ ವೈಭವದಿಂದ ಮೂಡಪ್ಪ ಸೇವೆಯು ಜರುಗಿದೆ.

ಇಲ್ಲಿ ಸಿದ್ಧಿವಿನಾಯಕನಿಗೆ ಅತ್ಯಂತ ಪ್ರಿಯವಾದ ಸೇವೆಯೆಂದರೆ ’ಉದಯಾಸ್ತಮನ’ ಸೇವೆ ಹಾಗೂ ’ಪಚ್ಚಪ್ಪ’ ಸೇವೆ. ದಿನವೂ ಬರುವ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆಯಿದೆ. ಇಷ್ಟೇ ಅಲ್ಲದೆ ಇನ್ನಿತರ ಹಲವಾರು ಸೇವೆಗಳನ್ನೂ ಇಲ್ಲಿ ನಡೆಸಲಾಗುತ್ತದೆ.

ದೇಶದಾದ್ಯಂತ ಸಾವಿರಾರು ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಈ ಕ್ಷೇತ್ರವು ಭಕ್ತರ ಬೇಡಿಕೆಗಳನ್ನು ಈಡೇರಿಸುವ ಪವಿತ್ರ ತಾಣವಾಗಿದೆ.



○copyrights2015geethabarlaamai

ಕಾಮೆಂಟ್‌ಗಳು

  1. Laaykiddu...
    ಬೇಸಿಗೆ ರಜೆಯಲ್ಲಿ ಉಪನೀತ ವಟುಗಳಿಗೆ ಉಚಿತ ವೇದ ತರಬೇತಿ ನಡೆಸುವ ಇಲ್ಲಿ ದೇವರಿಗೆ ವರ್ಷಂಪ್ರತಿ ಜಾತ್ರೆ ಬಹಳ ವಿಜೃಂಭಣೆಯಿಂದ ಸಂಕ್ರಾಂತಿ ಹಬ್ಬದಿಂದ ತೊಡಗಿ ಐದು ದಿನಗಳ ಕಾಲ ನೆರವೇರುತ್ತದೆ. :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ