’ಅಪ್ಪ’ ಎಂಬ ಎರಡಕ್ಷರಗಳ ಪದ ಅದೆಷ್ಟು ಅದ್ಭುತವಾದುದು. ಮಕ್ಕಳ ಬಾಳಿನಲ್ಲಿ ಅಪ್ಪನ ಪಾತ್ರವೂ ಅಮ್ಮನಷ್ಟೇ ಮಹತ್ತರವಾದುದು. ಪ್ರತೀ ಜೂನ್ ತಿಂಗಳ ಮೂರನೇ ಭಾನುವಾರವನ್ನು ’ಅಪ್ಪಂದಿರ ದಿನ’ವನ್ನಾಗಿ ಆಚರಿಸಲಾಗುವುದು. ಅಂದರೆ ಮಕ್ಕಳೆಲ್ಲರೂ ತಮ್ಮ ಅಪ್ಪಂದಿರಿಗೆ ಶುಭಾಶಯ ಕೋರುವ ದಿನ. ಅಪ್ಪ ಮಕ್ಕಳ ನಡುವಿನ ಮಧುರ ಬಾಂಧವ್ಯ ತನ್ಮೂಲಕ ವ್ರುದ್ಧಿಸುವುದು.
ಅಪ್ಪನೆಂದರೆ ಎಲ್ಲರಿಗೂ ಒಂದು ರೀತಿಯ ಭಯ. ಅಮ್ಮನಷ್ಟು ಆತ್ಮೀಯತೆ ಅಪ್ಪನ ಬಳಿಯಿರದು. ಕಾರಣ ಸದಾ ದುಡಿಮೆಯಲ್ಲಿ ಮುಳುಗಿರುವ ಅಪ್ಪ ಮನೆಯಿಂದ ಹೊರಗೆಯೇ ಹೆಚ್ಚಿನ ಸಮಯವನ್ನು ವ್ಯಯಿಸಬೇಕಾಗುತ್ತದೆ. ಆದರೆ ಸದಾಕಾಲ ಜೊತೆಗಿದ್ದು ತಮ್ಮೆಲ್ಲ ಬೇಕು-ಬೇಡಗಳನ್ನು ಗಮನಿಸುವ ಅಮ್ಮನೊಂದಿಗೆ ಮಕ್ಕಳಿಗೆ ಸಲುಗೆ ಜಾಸ್ತಿ.ಹಿಂದಿನ ಕಾಲದಲ್ಲಂತೂ ಅಪ್ಪನೆಂದರೆ ಮಕ್ಕಳಿಗೆ ಒಂದು ರೀತಿಯ ಅವ್ಯಕ್ತ ಭಯವಿತ್ತು. ಹೊಲದಲ್ಲಿ ದುಡಿಮೆ ಮುಗಿಸಿ ಸಂಜೆ ಅಪ್ಪ ಮನೆಗೆ ಮರಳಿದಾಗ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲರೂ ಸದ್ದಿಲ್ಲದೆ ಒಳಸೇರಿ ಪುಸ್ತಕ ಬಿಡಿಸಿ ಓದಲು ಕೂರುವುದು ಸಾಮಾನ್ಯವಾಗಿತ್ತು. "ಏ ಮಗಾ ಬಾ ಇಲ್ಲಿ" ಎಂದು ಅಪ್ಪ ಕರೆದರೆ ಭಯದಿಂದ ಮೆಲ್ಲನೆ ಹೊರಗಡಿಯಿಡುತ್ತಾ ತಲೆತಗ್ಗಿಸಿ ನೆಲ ನೋಡುತ್ತಾ ಅಪ್ಪನ ಮುಂದೆ ನಿಲ್ಲುತ್ತಿದ್ದ ದ್ರುಶ್ಯ ಸಾಮಾನ್ಯ. ಏಕೆಂದರೆ ಅಪ್ಪನ ಮಾತಲ್ಲೇ ವ್ಯಕ್ತಗೊಳುತ್ತಿದ್ದ ಒರಟುತನ ಇದಕ್ಕೆ ಕಾರಣವಾಗಿರಬಹುದು.
ಆದರಿಂದು ಹಾಗಲ್ಲ. ಅಪ್ಪನಂತೆಯೇ ಅಮ್ಮನೂ ದುಡಿಯಲು ಹೊರಹೋಗುತ್ತಾಳೆ. ಹಾಗಾಗಿ ಬೆಳಗ್ಗೆ ಬೇಗನೆದ್ದು ಅಮ್ಮ ಅಡುಗೆ ಕೆಲಸಗಳಲ್ಲಿ ನಿರತಳಾದರೆ ಮಕ್ಕಳ ಬೇಕು-ಬೇಡಗಳನ್ನು ಗಮನಿಸುವ ಜವಾಬ್ದಾರಿ ಅಪ್ಪನದಾಗುತ್ತದೆ. ಮಕ್ಕಳಿಗೆ ಸ್ನಾನ ಮಾಡಿಸಿ, ಹಲ್ಲುಜ್ಜಿಸಿ, ತಿಂಡಿ ತಿನಿಸಿ ಸಮವಸ್ತ್ರ , ಶೂ ಸಾಕ್ಸ್ ತೊಡಿಸಿ ಅವರನ್ನು ಶಾಲೆಗೆ ಅಣಿಗೊಳಿಸುವ ಕೆಲಸ ಅಪ್ಪಂದಿರದು. ನಂತರ ಮಕ್ಕಳನ್ನು ಗಾಡಿಯಲ್ಲಿ ಕೂರಿಸಿ ಶಾಲೆಗೆ ಬಿಟ್ಟು ಟಾ...ಟಾ.... ಬೈ ಹೇಳಿ ಮನೆಗೆ ಮರಳುವ ದ್ರುಶ್ಯ ನಗರಗಳಲ್ಲಿಂದು ಸಾಮಾನ್ಯ. ಪರಿಣಾಮವಾಗಿ ಮಕ್ಕಳಿಗೆ ಅಮ್ಮನಷ್ಟೇ ಸಲುಗೆ, ಆತ್ಮೀಯತೆ ಅಪ್ಪಂದಿರ ಜೊತೆಗೂ ಬೆಳೆಯುತ್ತದೆ.
ಅಪ್ಪನ ಕೈ ಹಿಡಿದು ರಸ್ತೆಗಳಲ್ಲಿ ಸಾಗುತ್ತಿದ್ದರೆ ಪುಟ್ಟ ಮಕ್ಕಳಿಗೆ ವಿಶ್ವವನ್ನೇ ಗೆಲ್ಲಬಲ್ಲೆನೆಂಬ ವಿಶ್ವಾಸ. ಅಪರಿಚಿತರು ಅದೇ ಪುಟ್ಟ ಮಗುವನ್ನು ಮಾತಾಡಿಸಲೆತ್ನಿಸಿದರೆ ಓಡಿಹೋಗಿ ಅಪ್ಪನ ತೋಳ್ತೆಕ್ಕೆಯಲ್ಲಿ ಸೇರಿ ಮುಖ ಮುಚ್ಚಿಕೊಂಡಾಗಲಂತೂ ಅಪ್ಪ ಜೊತೆಗಿದ್ದರೆ ಯಾರೂ ನನ್ನನ್ನು ಸೋಲಿಸಲಾರರು ಎಂಬ ಧೈರ್ಯ. ಇದೇ ರೀತಿ ಅಪ್ಪಂದಿರಿಗೂ ತಮ್ಮ ಮಕ್ಕಳ ಮೇಲಿನ ಜವಾಬ್ದಾರಿ ಬಹಳ ಹಿರಿದು. ತನ್ನ ಮಕ್ಕಳನ್ನು ಸಮಾಜದ ಸತ್ಪ್ರಜೆಯಾಗಿಸುವುದರಲ್ಲಿ ತಾಯಿಯಷ್ಟೇ ತಂದೆಯ ಪಾತ್ರವೂ ಮಹತ್ವದ್ದು. ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದ ಮಕ್ಕಳು ಏನಾದರೂ ಸಾಧನೆಗೈದು ದೇಶದ ಕೀರ್ತಿಪತಾಕೆಯನ್ನು ಎತ್ತರೆತ್ತರಕ್ಕೆ ಹಾರಿಸಬಲ್ಲರು. ಹಾಗೆಯೇ ಹೆತ್ತವರ ಪ್ರೀತಿಯಿಂದ ವಂಚಿತರಾದವರು ದೇಶಕ್ಕೆ ಕಂಟಕ ಪ್ರಾಯರಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಮಕ್ಕಳ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸುವ ಅಪ್ಪ-ಅಮ್ಮಂದಿರು ನಿಜಕ್ಕೂ ಮಕ್ಕಳ ಮಿತ್ರರು. ಆದರೆ ತಮ್ಮ ಮಕ್ಕಳನ್ನು ಕಡೆಗಣಿಸುವವರು ಮಾತ್ರ ಅವರ ಶತ್ರುಗಳೇ ಸರಿ.ಅದಕ್ಕಾಗಿಯೇ ಸರ್ವಜ್ನ್ಯನು ಒಂದೆಡೆ ನುಡಿದಿದ್ದಾನೆ-"ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರುವು, ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು ಸರ್ವಜ್ನ್ಯ" ಎಂಬುದಾಗಿ. ಎಂದರೆ ತನ್ನ ಮಕ್ಕಳಿಗೆ ವಿದ್ಯೆ ನೀಡಿ ಸನ್ಮಾರ್ಗದಲ್ಲಿ ನಡೆಸುವುದು ಅಪ್ಪನಾದವನ ಕರ್ತವ್ಯ. ಇದನ್ನು ಪಾಲಿಸದ ತಂದೆ ತನ್ನ ಮಕ್ಕಳ ಪಾಲಿಗೆ ಶತ್ರುವಿದ್ದಂತೆ ಎಂದು. ಮಕ್ಕಳನ್ನು ಸದಾ ಬೆಂಬಲಿಸಿ ಅವರ ಏಳಿಗೆಗಾಗಿ ಹಂಬಲಿಸುವ ತಂದೆ-ತಾಯಿ ಮಕ್ಕಳ ಪಾಲಿಗೆ ದೇವರಿದ್ದಂತೆ.
ಕೆಲವು ಕುಟುಂಬಗಳಲ್ಲಿ ’ಹೆಂಡ ಸಾರಾಯಿ ಸಹವಾಸ, ಹೆಂಡತಿ-ಮಕ್ಕಳ ಉಪವಾಸ’ವೆಂಬಂತೆ ತಮ್ಮ ದುಡಿತದ ಸಂಪೂರ್ಣ ಹಣವನ್ನು ಹೆಂಡದಂಗಡಿಗೇ ಸುರಿದು ಹೆಂಡತಿ-ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನಿಡುವ ಅಪ್ಪಂದಿರಿದ್ದಾರೆ. ಇಂತಹವರ ಮಕ್ಕಳು ಕುಡಿತ, ಕಳ್ಳತನ, ಜೂಜು ಇತ್ಯಾದಿಗಳನ್ನು ಮೈಗೂಡಿಸಿಕೊಂಡರೆ ಅಚ್ಚರಿಯಿಲ್ಲ.
ಆದರೆ ಹೆಚ್ಚಿನ ಕುಟುಂಬಗಳಲ್ಲೂ ಅಪ್ಪಂದಿರು ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಪಣತೊಟ್ಟು ದುಡಿಯುವುದನ್ನು ನಾವು ಕಾಣಬಹುದು. ಹೀಗಾಗಿ ಇಂದಿನ ಮಕ್ಕಳಲ್ಲಿ ತಮ್ಮ ಅಪ್ಪಂದಿರ ಬಗ್ಗೆ ಭಯವೂ ಕಮ್ಮಿ. ಅಪ್ಪನೆಂದರೆ ಇಂದು ಮಕ್ಕಳಿಗೆ ಆಪ್ತಮಿತ್ರನಿದ್ದಂತೆ! ತಮ್ಮೆಲ್ಲಾ ದೈನಂದಿನ ಚಟುವಟಿಕೆಗಳಲ್ಲಿ ಜೊತೆಯಾಗುವ ಪ್ರೀತಿಯ ಪಪ್ಪ ಆಪ್ತರಕ್ಷಕನಿದ್ದಂತೆ. ಗಂಡು ಮಕ್ಕಳು ತಾಯಂದಿರನ್ನು ಹೆಚ್ಚಾಗಿ ಪ್ರೀತಿಸಿದರೆ ಹೆಣ್ಣು ಮಕ್ಕಳು ತಮ್ಮ ಅಪ್ಪಂದಿರನ್ನೇ ಹೆಚ್ಚಾಗಿ ಪ್ರೀತಿಸುತ್ತಾರೆ ಎಂಬುದು ಕೆಲವೊಂದು ಅಂಕಿ-ಅಂಶಗಳಿಂದ ತಿಳಿದು ಬಂದ ವಿಚಾರ. ಆದ್ದರಿಂದ ನಿಜಕ್ಕೂ ಅಪ್ಪನೆಂದರೆ ಬರೀ ಅಪ್ಪನಲ್ಲ. ಆತ ಜೀವನದುದ್ದಕ್ಕೂ ಸಲಹೆ-ಸೂಚನೆಗಳನ್ನು ನೀಡುತ್ತಾ ಸಂಕಷ್ಟಗಳ ನಿವಾರಣೆಗೆ ನೆರವಾಗುವ ದೈವರೂಪಿ ಮಾನವ! "ತಾಯಿ-ತಂದೆ ಇಬ್ಬರೂ ಕಣ್ಣಿಗೆ ಕಾಣೋ ದೇವರು" ಎಂಬಂತೆ ನಮ್ಮ ಕಣ್ಣಿಗೆ ಕಾಣಿಸುವ ದೇವರೆಂದರೆ ನಮ್ಮ ಹೆತ್ತವರು.
ಆದ್ದರಿಂದ ಇಂತಹ ಹಿರಿಯರು ಮುಪ್ಪಡರಿದಾಗ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿ ಎನ್ನಲಾರಂಭಿಸಿದರೂ ಅದನ್ನು ತಾಳಲಾರದೆ ’ಈ ಮುದುಕರ ಕಾಟ ತಪ್ಪಿದ್ದಲ್ಲ’ವೆಂದು ಗೊಣಗುತ್ತಾ ಅವರನ್ನು ವ್ರುದ್ಧಾಶ್ರಮಕ್ಕೆ ದೂಡದೇ ಪ್ರೀತಿಯಿಂದ ಅವರಿಗೆ ನಯವಾಗಿ ತಿಳಿಹೇಳಿ. ಏಕೆಂದರೆ "ದೊಡ್ಡವರೆಲ್ಲ ಜಾಣರಲ್ಲ..." ಎಂಬಂತೆ ಕೆಲವಿಚಾರಗಳಲ್ಲಿ ಕಿರಿಯರೂ ಹಿರಿಯರಿಗಿಂತ ಹೆಚ್ಚಿನ ಪಾಂಡಿತ್ಯ ಪಡೆದಿರುತ್ತಾರೆ. ಆಗ ಪ್ರೀತಿಯಿಂದ ಹಿರಿಯರಿಗೆ ನಯವಾಗಿ ತಿಳಿಹೇಳಿದರೆ ಅವರು ಅದನ್ನು ಒಪ್ಪಿಕೊಳ್ಳಬಲ್ಲರು. ಸದಾ ಅವರ ಭಾವನೆಗಳನ್ನು ಗೌರವಿಸಿ. ಈರ್ವರ ನಡುವೆ ಹೊಂದಾಣಿಕೆಯಿದ್ದಲ್ಲಿ ಬದುಕು ಸ್ವರ್ಗ, ಮನೆ ನಂದನವಾದೀತು. ವ್ರುದ್ಧಾಪ್ಯದಲ್ಲಿ ಮನಸ್ಸು ಬಯಸುವುದು ಮಕ್ಕಳು-ಮೊಮ್ಮಕಳ ಪ್ರೀತಿ, ಒಡನಾಟವನ್ನಷ್ಟೇ ವಿನಹ ಅವರ ಬಳಿಯಿರುವ ಕೋಟಿ ಬೆಲೆಬಾಳುವ ಅಪಾರ ಆಸ್ತಿಯನ್ನಲ್ಲ. ಆದ್ದರಿಂದ ನಿಮ್ಮ ಅಪ್ಪ-ಅಮ್ಮಂದಿರಿಗೆ ಸದಾ ನಿಮ್ಮ ಮನೆ-ಮನದಲ್ಲಿ ಉನ್ನತ ಸ್ಥಾನವಿರಲಿ. ಅಪ್ಪಂದಿರ ದಿನದ ಈ ಸಂದರ್ಭದಲ್ಲಿ ವಿಶ್ವದ ಎಲ್ಲಾ ಅಪ್ಪಂದಿರಿಗೂ ಶುಭಾಶಯಗಳು!
copyright21/06/15geethabarlaamai
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ