ಆಸಕ್ತಿಯೇ ಹವ್ಯಾಸವಾದಾಗ...........

ಕರಾವಳಿಯ ಭಾಗವಾದ ಕಾಸರಗೋಡಿನ ಒಂದು ಕುಗ್ರಾಮ ಬದಿಯಡ್ಕ. ಈ ಹಳ್ಳಿಯ ಒಂದು ಪುಟ್ಟ ನದಿಯ ಬಳಿ ನಮ್ಮ ಮನೆ "ಬರ್ಲ". ನದಿಯ ಆ ಬದಿಯ ತೋಟದಲ್ಲಿ ಆಳುಗಳೊಂದಿಗೆ ಕಷ್ಟಪಟ್ಟು ಬೆವರಿಳಿಸಿ ಬೆಳೆ ಕೊಯ್ದು ತರುವ ತಂದೆ. ಅದೇ ನದಿಯ ಈ ಬದಿಯ ಮನೆಯಲ್ಲಿ ಗಂಡ-ಮಕ್ಕಳಿಗಾಗಿ ಜೀವ ತೇಯುವ ತಾಯಿ. ಇವರಿಬ್ಬರ ಕಷ್ಟದಲ್ಲಿಯೂ ಖುಷಿ ನೀಡಲೆಂಬಂತೆ ಮನೆಯಲ್ಲಿ ಗಲಗಲನೆ ಸದ್ದು ಮಾಡುತ್ತ ತುಂಟಾಟ ಮಾಡುತ್ತಾ ಹಬ್ಬದ ವಾತಾವರಣ ಸ್ರುಷ್ಟಿಸುವುದರಲ್ಲಿ ಸಫಲರಾಗಿದ್ದೆವು ನಾವು ಏಳು ಮಕ್ಕಳು. ತಂದೆ ತಾಯಿಯ ಏಳು ಮಕ್ಕಳಲ್ಲಿ ನಾನು ಐದನೆಯವಳು.
ಮನೆಯಲ್ಲಿ ಬಡತನವಿದ್ದರೂ, ನಮ್ಮ ತಂದೆ ನಮ್ಮನ್ನೆಲ್ಲ ಓದಿಸಲು ಹಿಂದೇಟು ಹಾಕಲಿಲ್ಲ. ಎಲ್ಲರನ್ನೂ ವಿದ್ಯಾವಂತರನ್ನಾಗಿಸಿ ದೇಶಕ್ಕೆ ಒಳ್ಳೆ ಪ್ರಜೆಯನ್ನು ನೀಡಬೇಕೆಂಬ ತುಡಿತ ಅವರಲ್ಲಿ ಸದಾಕಾಲ ಜೀವಂತವಾಗಿತ್ತು. ಅಷ್ಟೇ ಅಲ್ಲ, ಸದಾ ಕಾಲ ಉತ್ಸಾಹದ ಚಿಲುಮೆಯಾಗಿದ್ದ ಅವರ ನಡೆ ನುಡಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ.

ಶಾಲೆಗೆ ಹೋಗುವಾಗ ಅಣ್ಣ-ತಮ್ಮ, ಅಕ್ಕ-ತಂಗಿಯರೊಂದಿಗೆ ಕೈ ಹಿಡಿದುಕೊಂಡು ನದಿ ದಾಟುತ್ತಿದ್ದ ಆ ದ್ರುಶ್ಯ ಸದಾ ಹಸಿರು. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ ಎರಡನೇ ಅಣ್ಣ ಮುಂದೆ ತನ್ನ ಕೈಚೀಲದೊಂದಿಗೆ ಎಂಟು ಡಬ್ಬಿಗಳ ದೊಡ್ಡ ಬುತ್ತಿ ಹೊತ್ತೊಯುತ್ತಿದ್ದರೆ ನಾವುಗಳು ಹಿಂದಿನಿಂದ ಕುಂಟಾಲ, ಚೂರಿ ಹಣ್ಣು,ಜೇಡೆ ಹಣ್ಣು, ಇತ್ಯಾದಿ ಹಣ್ಣುಗಳನ್ನು ಕೊಯ್ದು ಪುಸ್ತಕ ಚೀಲದಲ್ಲಿ ತುಂಬಿಸಿ,ಶಾಲೆಗೆ ಒಯ್ಯುತ್ತಿದ್ದೆವು.ಆ ಹಣ್ಣುಗಳನ್ನು ಗೆಳತಿಯರೊಂದಿಗೆ ಹಂಚಿಕೊಂಡು, ಮೇಷ್ಟ್ರು ಪಾಠ ಮಾಡುವಾಗ ಹಿಂದೆ ಕುಳಿತು ತಿನ್ನುತ್ತಿದ್ದೆವು.

ಅಡಿಕೆಗೆ ಬೆಲೆ ಬಂದ ಸಮಯ ಅಟ್ಟದ ಮೇಲಿದ್ದ ಹಳೇ ಅಡಿಕೆಗಳನ್ನು ಬುಟ್ಟಿಗಳಲ್ಲಿ ಹೊರ ತೆಗೆದು ಮಳೆ ಬರುವ ಮುನ್ನವೇ ಸುಲಿದು ಮುಗಿಸಬೇಕಿತ್ತು. ಆಳುಗಳಿಗೆ ದುಡ್ಡು ಕೊಟ್ಟು ಸುಲಿಸುವಷ್ಟು ಹಣ ನಮ್ಮಲಿರದ ಆ ಸಂದರ್ಭದಲ್ಲಿ ನಾವು ಮಕ್ಕಳು ಇದ್ದುದರಿಂದ ರಾತ್ರಿಯೆಲ್ಲ ಕುಳಿತು ತೂಕಡಿಸಿಕೊಂಡು ಕೈಗಳಿಗೆ ಗಾಯ ಮಾಡಿಕೊಂಡು ಸುಲಿಯುತ್ತಿದ್ದೆವು. ತೂಕಡಿಸುತ್ತಿದ್ದಾಗ ತಂದೆ ಅಥವ
ತಾಯಿಯವರಿಂದ ಬರುತ್ತಿದ್ದ ಆ ಬೈಗುಳ ,ಕೂವೆ(ಅರಾರೂಟ್)ಗೆಡ್ಡೆಯ ಪುಡಿ ತಯಾರಿಸಿ ಮಾರಾಟ ಮಾಡಿ ಅದರಲ್ಲಿ ಬಂದ ಹಣವನ್ನು ನಮ್ಮೆಲ್ಲರ ಓದಿಗೆ ವಿನಿಯೋಗಿಸುತ್ತಿದ್ದ ತಂದೆಯವರ ಪರಿಪಾಟಲು ನೆನೆದರೆ ಈಗಲೂ ನಮ್ಮೆಲ್ಲರ ಕಣ್ಣಂಚು ಹನಿಗೂಡುತ್ತದೆ. ಮನೆಯಲ್ಲಿ ಆಗ ಕಿತ್ತು ತಿನ್ನುವ ಬಡತನ. ಕೆಲವೊಮ್ಮೆ ಅಕ್ಕಿ ಕೊಂಡು ತರಲು ಹಣವಿಲ್ಲದ ಸಂದರ್ಭದಲ್ಲಿ ತೋಟದಲ್ಲಿ ಬೆಳೆಯುತ್ತಿದ್ದ ಬಾಳೆಕಾಯಿ, ಗೆಣಸು ಇತ್ಯಾದಿಗಳನ್ನು ಬೇಯಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆಗೊಮ್ಮೆ ಈಗೊಮ್ಮೆ ದೊರೆಯುತ್ತಿದ್ದ ಪಡಿತರ ಅಕ್ಕಿಯಲ್ಲಿ ತಾಯಿಯವರು ಅನ್ನ ತಯಾರಿಸುತ್ತಿದ್ದರು. ಆ ಅಕ್ಕಿ ಕೆಲವೊಮ್ಮೆ ಕೊಳೆತ ಮೀನಿನ ವಾಸನೆಯನ್ನು ಹೊಂದಿರುತಿದ್ದುರಿಂದ ಮೂಗನ್ನು ಹಿಡಿದು ಬಾಯಿಗೆ ಊಟವನ್ನು ತಳ್ಳುತ್ತಿದ್ದ ದಿನಗಳು ಕಡಿಮೆಯೇನಲ್ಲ.

ಆಗೆಲ್ಲ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಅಪ್ಪಿ ತಪ್ಪಿ ಫೇಲಾದರೆ, ಗಡಗಡನೆ ನಡುಗುತ್ತಾ ಅಂಕಪಟ್ಟಿಯನ್ನು ಹಿದಿದು ತಂದೆಯವರ ಬಳಿ ಹೋದರೆ, ನಮ್ಮ ನಡುಕವನ್ನು ನೋಡಿಯೇ ಕಂಡು ಹಿಡಿದು ಬಿಡುತ್ತಿದ್ದರು ನಮ್ಮ ಪರೀಕ್ಷಾ ಫಲಿತಾಂಶವನ್ನು. ನನಗೋ ಗಣಿತವೆಂದರೆ ’ಕಬ್ಬಿಣದ ಕಡಲೆಯಾಗಿ’ ಪರಿಣಮಿಸಿತ್ತು. ಹೀಗಾಗಿ ಪಿ.ಯು.ಸಿಯಲ್ಲಿ ಕಲೆಯನ್ನು ನನ್ನ ಆಯ್ಕೆಯ ವಿಷಯವಾಗಿ ಆರಿಸಿಕೊಂಡೆ.
ಆಸಕ್ತಿಯಿಂದ ಕಲಿತು, ನಾನು ಕಲಿಯುದರಲ್ಲಿ ಸೊನ್ನೆ ಎಂದೇ ನಂಬಿದ್ದ ಹಲವರ ನಂಬಿಕೆಯನ್ನು ಸುಳ್ಳು ಮಾಡುವಂತೆ ದ್ವಿತೀಯ ಪಿ.ಯು.ಸಿಯಲ್ಲಿ ಇಡೀ ಕಾಲೇಜಿಗೆ ಪ್ರಥಮಳಾಗಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೆ. ನನ್ನ ಫಲಿತಾಂಶವನ್ನು ಎಲ್ಲರಿಗೂ ಅತ್ಯಾಶ್ಚರ್ಯವನ್ನು ಮೂಡಿಸಿತ್ತು. 

ಮುಂದೆ ಡಿಗ್ರೀ ಕಲಿಯುತ್ತಿದ್ದ ಸಂದರ್ಭದಲ್ಲಿ ಮನೆಯಲ್ಲಿ ತಾಯಿಯವರಿಗಾಗಿ ತರುತ್ತಿದ್ದ "ಸುಧಾ" ವಾರಪತ್ರಿಕೆಯನ್ನು ಓದುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಧಾರಾವಾಹಿಯ ಬಗ್ಗೆ ತಾಯಿಯವರು ವರ್ಣಿಸುತ್ತಿದ್ದ ರೀತಿ ನನ್ನಲ್ಲಿ ಉತ್ಸಾಹ ಮೂಡಿಸಿತ್ತು ಲೇಖನವನ್ನು ಬರೆಯಲು. ಅದೇ ಸಂದರ್ಭದಲ್ಲಿ ಅಕ್ಕನ ಗೆಳತಿಯೊಬ್ಬಳು ಬರೆದ ಲೇಖನ ಸುಧಾದಲ್ಲಿ ಪ್ರಕಟಗೊಂಡಿತ್ತು. ಅದರಿಂದಾಗಿ ಆಕೆ ನಮ್ಮ ಹಳ್ಳಿಯಲೆಲ್ಲ ಪ್ರಚಲಿತಳಾದಳು. ಆಕೆಯನ್ನು ಎಲ್ಲರೂ ಪ್ರಶಂಸಿಸುತ್ತಿದುದನ್ನು ಕಂಡಿದ್ದ ನನಗೆ ನಾನೂ ಎಲ್ಲರಿಗೂ ಪರಿಚಯವಾಗಬೇಕು ಆದರೆ ಯಾವುದೋ ಒಂದು ಸಂದರ್ಭದಲ್ಲಿ ಎಲ್ಲಿಯೋ ಒಬ್ಬರನ್ನು ಭೇಟಿಯಾಗುವುದರಿಂದಲ್ಲ ಬದಲಾಗಿ ಹೆಚ್ಚೆಚ್ಚು ಒಳ್ಳೆಯ ಲೇಖನಗಳ ಮೂಲಕ ಎಂದು ನಿರ್ಧರಿಸಿಬಿಟ್ಟಿದ್ದೆ.


ಆದರೆ ಲೇಖನಕ್ಕೆ ಸೂಕ್ತ ವಿಷಯಕ್ಕಾಗಿ ಕಾಯುವ ಪರಿಸ್ಥಿತಿ ನನ್ನದಾಗಿತ್ತು. ಹೀಗಿರುವಾಗ ತಾಯಿಯವರಿಗೊಮ್ಮೆ ಕಾಲಿನ ಚರ್ಮದಲ್ಲಿ ಯಾವುದೋ ರೀತಿಯ ಅಲರ್ಜಿಯಾಗಿತ್ತು.ವೈದ್ಯರಿಗೆ ತೋರಿಸಲೆಂದು   ನನ್ನೊಂದಿಗೆ ತಾಯಿಯವರು ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿಯೋ... ವೈದ್ಯರು ರೋಗಿಗಳಿಲ್ಲದೇ ಖಾಲಿ ಹೊಡೆಯುತ್ತಿದ್ದರು. ಹೀಗಿದ್ದೂ ನಾವು ಒಳಗಡಿಯಿಡುತ್ತಿದ್ದಂತೆಯೇ ರೋಗಿಯನ್ನು ತಪಾಸಿಸಿ ಧೈರ್ಯ ಹೇಳಿ ಔಷಧವನ್ನು ನೀಡುವ ಬದಲಿಗೆ ತಮ್ಮ ತಲೆಯೊಳಗಿರುವ ವೈಯಕ್ತಿಕ ಬವಣೆಗಳ ಯೋಚನೆಗಳನ್ನು ನಮ್ಮ ಮೇಲೆ ಹರಿ ಹಾಯ್ದು ಸರಿಯಾಗಿ ಕಾಯಿಲೆ ಏನೆಂಬುದನ್ನು ತಿಳಿಸದೆ ಸರಿಯಾದ ಔಷಧವನ್ನೂ ನೀಡದೆ ಕಳಿಸಿಬಿಟ್ಟರು. ಇದರಿಂದ ಬೇಸತ್ತ ನಾನು ಅವರ ಬಗ್ಗೆಯೇ ಒಂದು ಪುಟ್ಟ ವರದಿಯನ್ನು ಸುಧಾ ಪತ್ರಿಕೆಯ "ನಿಮ್ಮ ಪುಟ"ವೆಂಬ ವಿಭಾಗಕ್ಕೆ ಕಳುಹಿಸಿದ್ದೆ. ನನ್ನ ಅದ್ರುಷ್ಟವೋ ಎಂಬಂತೆ ಅದು ಪ್ರಕಟವೂ ಆಯಿತು. ಆದರೆ ನನಗೆ ದೊರೆತ ಮೊದಲ ಪ್ರತಿಕ್ರಿಯೆ ತಂದೆಯವರ  ಬೈಗುಳ. "ಹೀಗೇಕೆ ಬರೆದೆ? ಅಕ್ಕಸ್ಮಾತ್  ನಿನ್ನ ಮೇಲೆ ಅವರೇನಾದರೂ ದ್ವೇಷ ಸಾಧಿಸಲು ಬಂದರೆ ಏನ್ ಮಾಡ್ತಿ? ಮಾಡೋಕೆನು ಕೆಲಸವಿಲ್ಲ. ಸಾಕಿನ್ನು ಬರೆದದ್ದು. ಇನ್ನು ಮುಂದೆ ಪೆನ್ನು ಪೇಪರು ಅಂತ ಹಿಡಿದಿಯೋ ಅಷ್ಟೇ ನಿನ್ನ ಕಥೆ!!!!!". ಆದರೆ ನನ್ನ ತಾಯಿಯವರು ಆ ಸಂದರ್ಭದಲ್ಲಿ ಬಳಿ ಬಂದು, ಸಮಾಧಾನಿಸಿ,  ಬರವಣಿಗೆ ನಿನ್ನ ಆಸಕ್ತಿ ಅದನ್ನೆಂದೂ ಬಿಡಬೇಡ, ಮುಂದುವರೆಸು ಎಂದರು.


 ಹೀಗೆ ಚಿಕ್ಕ ಪುಟ್ಟ ಹನಿಗವನಗಳು, "ನಿಮ್ಮ ಪುಟ"ದಂತಹ ಲೇಖನಗಳು, "ನೀವು ಕೇಳಿದಿರಿ" ವಿಭಾಗದ ತರ್ಲೆ ಪ್ರಶ್ನೆಗಳು, "ಮಂಗಳ", "ಹೊಸ ದಿಗಂತ", "ಉದಯವಾಣಿ", "ತುಷಾರ", "ತರಂಗ" ಇತ್ಯಾದಿ ಪತ್ರಿಕೆಗಳಿಗೆ ಮಕ್ಕಳ ಕಥೆಗಳನ್ನು ಬರೆಯುತ್ತಿದೆ. ಮುಂದೆ ಹಲವಾರು ಕಡೆ ಹಲವಾರು ಜನರು ನನ್ನ ಹೆಸರನ್ನು ಕೇಳಿ "ನೀವು ತರಂಗದಲ್ಲಿ ಕಥೆ ಬರೆಯುತ್ತೀರಲ್ಲ? ಅದೇ ಗೀತಾ ಬರ್ಲ ಅವರ?" ಎನ್ನುವಾಗ ಹೆಮ್ಮೆಯೆನಿಸುತ್ತಿತ್ತು.


ಮದುವೆಯಾಗಿ "ಗೀತಾ ಬರ್ಲಾ"ಳಿಂದ "ಗೀತಾ ಬರ್ಲ ಅಮೈ"ಯಾಗಿ ಬದಲಾದೆ. ಹೆಸರೇನೋ ಸ್ವಲ್ಪ ಬದಲಾಯಿತು ಆದರೆ ನನ್ನ ಆಸಕ್ತಿ ಅಷ್ಟು ಹೊತ್ತಿಗೆ ಹವ್ಯಾಸವಾಗಿ ಬದಲಾವಣೆಗೊಂಡಿತ್ತು. ಬಿಡಲು ಮನಸಿರಲಿಲ್ಲ. ಬರವಣಿಗೆಯನ್ನು ಮುಂದುವರೆಸಿದೆ. ಆದರೆ ಮಗಳು ನಮ್ಮ ಜೀವನದಲ್ಲಿ ಪ್ರವೇಶಿಸಿದ ನಂತರ ಮನೆಯ ಜವಾಬ್ದಾರಿ, ಮಗಳ ಓದು ಇತ್ಯಾದಿ ಕಾರಣಗಳಿಂದ ನನ್ನ ಹವ್ಯಾಸಕ್ಕೆ "ಪೂರ್ಣ ವಿರಾಮ"ವನ್ನೇ ಹಾಕಿಬಿಟ್ಟಿದ್ದೆ.


ಆದರೆ ನನ್ನ ಆ ಹಳೆಯ ಲೇಖನಗಳು ನನ್ನ ಮಗಳನ್ನು ಕಾಡದೆ ಇರಲಿಲ್ಲ. ಅವಳು ಹೈಸ್ಕೂಲಿಗೆ ಸೇರಿದ ಸಂದರ್ಭದಲ್ಲೊಮ್ಮೆ ನಾನು ನನ್ನ ಹಳೇ ವಾರಪತ್ರಿಕೆಗಳನ್ನು ತಿರುವಿ ಹಾಕುವುದನ್ನು ಕಂಡು "ಅಮ್ಮ ನೀನೆಷ್ಟು ಚೆನ್ನಾಗಿ ಕಥೆಗಳನ್ನು ಪ್ರಶ್ನೆಗಳನ್ನು ಬರೆಯುತ್ತಿದ್ದೆ. ಈಗೇಕೆ ಬರೆಯುವುದೇ ಇಲ್ಲ?". ನನ್ನ ಬಳಿಯಿದ್ದ ಉತ್ತರ ಒಂದು ಮುಗುಳ್ನಗೆಯಷ್ಟೆ.

ಆದರೆ ಆಕೆಯ ಪ್ರಶ್ನೆ ಅಲ್ಲಿಗೇ ಮುಗಿಯುವಂತಹುದಾಗಿರಲಿಲ್ಲ. ದಿನಾ ಏನಾದರೊಂದು ನೆಪ ಹಿಡಿದುಕೊಂಡು ಮತ್ತೆ ನನ್ನ ಹವ್ಯಾಸದ ಬಗ್ಗೆಯೇ ಕೆಣಕುತ್ತಿದ್ದಳು. ಇದೆಲ್ಲಾ ನಡೆಯುತ್ತಾ ಹೇಗೋ ಒಂದು ವರ್ಷ ಕಳೆಯಿತು. ಆದರೆ ಅಷ್ಟರಲ್ಲಿ ಅವಳ ಪ್ರಶ್ನೆಗಳು ನನ್ನಲೆಂದೋ ಹುಗಿದು ಹೋಗಿದ್ದ ಆಸಕ್ತಿಯನ್ನು ಮತ್ತೇ ಬಡಿದೆಬ್ಬಿಸಿತ್ತು. ಹೀಗಿರಬೇಕಾದರೆ ಆಕೆ ತನ್ನ ಬೇಸಿಗೆ ರಜೆಯಲ್ಲಿ ನನ್ನ ಬಳಿಯೊಂದು ಕೋರಿಕೆ ಇತ್ತಳು. " ಈ ರಜೆಯಲ್ಲಿ ನೀ ಲೇಖನ ಬರೆಯುವುದನ್ನು ನಾನೂ ನೋಡಬೇಕು. ದಯವಿಟ್ಟು ಬರೆ!!!".


ನನಗೂ ಇದೇ ಬೇಕಿತ್ತೇನೋ..... ಪತಿಯವರೂ ಮಗಳೊಂದಿಗೆ ಸಹಕಾರವಿತ್ತರು. ಮೊದಲಾದರೆ ಬರೆಯುವ ಸಾಮಗ್ರಿಗಳನ್ನು ನಾನು ನನ್ನ ದುಡಿತದ ಹಣದಲ್ಲಿ ಕೊಳ್ಳುತ್ತಿದೆ. ಈಗ ದುಡಿಮೆಯೂ ಇಲ್ಲ ಇವರ ಬಳಿ ಹೇಗೆ ಕೇಳುವುದು ಎಂಬ ಯೋಚನೆಯಲ್ಲಿರುವಾಗಲೇ ಬರೆಯಲು ಬೇಕಾದ ಪುಸ್ತಕ, ಪತ್ರಿಕೆ, ಹಾಳೆ, ಲೇಖನಿ ಎಲ್ಲವೂ ಹಾಜರಾಗಿತ್ತು. ಏನು ಹೇಗೆ ಎಂದು ಯೋಚಿಸುವ ಮೊದಲೇ ಮನೆಯವರನ್ನು ಮಗಳು ಪುಸಲಾಯಿಸಿ ಎಲ್ಲವನ್ನೂ ಕೊಂಡು ತಂದು ಮುಂದೆಯಿಟ್ಟಿದ್ದಳು. ಮತ್ತೆ ಶುರುವಾಯಿತು ನನ್ನ ಬರವಣಿಗೆ. ಆದರೆ ಈ ಬಾರಿ ಬರೀ ನನ್ನ ಆಸಕ್ತಿಯಾಗಿ ಅಲ್ಲ, ನನ್ನ ಹವ್ಯಾಸವಾಗಿ, ನನ್ನ ಮನದ ಖುಶಿಯಾಗಿ, ನೆಮ್ಮದಿಯಾಗಿ ಬರವಣಿಗೆಯ ಸಾಲುಗಳು ಲೇಖನಿಯಿಂದ ಲೇಖನವಾಗಿ ಹರಿಯಿತು.


ಮಧ್ಯದಲ್ಲಿ ಬರವಣಿಗೆಯನ್ನು ಸಂಪೂರ್ಣವಾಗಿ ಬಿಟ್ಟ ಪರಿಣಾಮ, ಹೊಸತಾಗಿ ಎಲ್ಲಾ ಪತ್ರಿಕೆಗಳಿಗೂ ನನ್ನ ಹೆಸರು ಪರಿಚಯವಾಗಬೇಕಿತ್ತು, ನನ್ನ ಲೇಖನಗಳು ಪರಿಚಯವಾಗಬೇಕಿತ್ತು. ಅಲ್ಲದೆ ಮೊದಲಿದ್ದ ವಿಭಾಗಗಳು ಅದೇ ಹೆಸರಿನಲ್ಲಿದ್ದರೂ ಒಳಗಿನ ವಿಷಯಗಳು ಬದಲಾವಣೆಯನ್ನು ಕಂಡಿದ್ದವು. ನನ್ನ ಪುಣ್ಯವೋ, ಅದ್ರುಷ್ಟವೋ ಒಟ್ಟಿನಲ್ಲಿ  ಈಗ ಕೈಗೆ ಕೆಮರಾ ಒಂದು ಬಂದದ್ದು ಕೆಲಸವನ್ನು ಸ್ವಲ್ಪ ಸುಲಭವಾಗಿಸಿತ್ತು. ಹೀಗಿರುವಾಗ ಮತ್ತೆ ನನ್ನ ಹವ್ಯಾಸಕ್ಕೆ ಪ್ರೋತ್ಸಾಹವೆಂಬಂತೆ "ಮಂಗಳ" ಪತ್ರಿಕೆಯು ನನ್ನ ಹನಿಗವನ ಪ್ರಕಟಿಸಿತು. ಮುಂದೆ ಹನಿಗವನಗಳಿಂದ ಕಥೆ, ಚಿಂಥನೆ,ಅಡಿಗೆ,ಸಾಮಾಜಿಕ ಲೇಖನಗಳು, ಕವನಗಳನ್ನು ಬರೆದೆ. ಹಲವು ಹಾಸ್ಯ ಲೇಖನಗಳು ಪ್ರಕಟಗೊಂಡವು. ಈಗ "ಬಿಟ್ಟೇನೆಂದರೂ ಬಿಡಲಿ ಹ್ಯಾಂಗ" ಎಂಬಂತೆ ನನ್ನ ಹವ್ಯಾಸಕ್ಕೆ ಒಂದು ರೀತಿಯಲ್ಲಿ ಅಂಟಿಕೊಂಡಿದ್ದೇನೆ. ಈಗ ಮಗಳು ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ರಜ ಸಮಯ. ಸಮಯ ಹೋಗುವುದಿಲ್ಲ. ಅದಕ್ಕೆ "ಅಮ್ಮಾ ಒಂಚೂರು ಮಾತಾಡಮ್ಮ....." ಎಂದರೆ ನಾನು ಬರವಣಿಗೆಯಲ್ಲಿ ಬಿಸಿ!!!! ಮತ್ತೆ ಆಕೆಯ ಕೋಪ, ನನ್ನ ರಮಿಸುವಿಕೆ ಎಲ್ಲ ಮುಗಿದು ಆಕೆಯನ್ನು ಸಮಾಧಾನಿಸಿ  "ಒಂದು ಕೆಲಸ ಮಾಡು ನೀನೆ ನನ್ನ ಬರವಣಿಗೆಗೆ ಒಂದು ವಿಷಯ ಕೊಡು" ಎಂದು ಅವಳನ್ನು ಯೋಚನೆಯಲ್ಲಿ ಬಿಡುವ ಎಂದು ತಿಳಿದರೆ ಆಕೆ "ಅಮ್ಮಾ, ಆ ಬರವಣಿಗೆಯನ್ನು ಒಂದು ಹತ್ತು ನಿಮಿಷ ಪಕ್ಕಕ್ಕಿಡು, ಎಷ್ಟು ಬರೀತಿಯಾ? ಒಂದು ಸ್ವಲ್ಪ ಹೊತ್ತು ಮಾತಾಡು, ನನ್ನ ಜೊತೆ ಬ್ಯಾಡ್ಮಿಂಟನ್ ಆಡು ಎಂದರೆ ಇಲ್ಲ ಬರೀಬೇಕು, ಬರೀಬೇಕು ಇದೇ ಆಯಿತಲ್ಲ ಕಥೆ!!!!" ಎಂದು ಟಿ.ವಿ. ನೋಡುತ್ತಾ ಕೋಪಿಸಿಕೊಂಡು ಕುಳಿತುಬಿಡುತ್ತಾಳೆ. ಆದರೆ ಅವಳನ್ನು ಸಮಾಧಾನಿಸುವ ಬಗೆ ನನಗೂ ತಿಳಿದಿದೆ. ಅದು ಬೇರೆ ವಿಷಯ.


ಬದುಕಿನ ಮುಂದಿನ ಕವಲೇನೋ? ನಾ ಕಾಣೆ.... ಆದರೆ ಯಾವುದೇ ಕವಲೆದುರಾದರೂ ನಿಮ್ಮೊಂದಿಗೆ ಹಂಚಿಕೊಳ್ಳದೆ ಇರಲಾರೆ. ಖಂಡಿತ ಓದುವಿರಲ್ಲ? ಓದಿ.... ನಿಮ್ಮ ಪ್ರೋತ್ಸಾಹ ನನ್ನೊಂದಿಗೆ ಸದಾ ಇರಲಿ  . ನನ್ನ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಸದಾ ಸ್ವಾಗತ.  ಸದ್ಯದ ಮಟ್ಟಿಗೆ ಇಂದಿನ ಬ್ಲಾಗಾಯಣವನ್ನು ನನ್ನ ಎರಡು ಹನಿಗವನಗಳೊಂದಿಗೆ ಮುಗಿಸುತ್ತೇನೆ!!!!!!!!!


 ಹೆಣ್ಣು

 ತಾಯಾಗಿ, ಸತಿಯಾಗಿ,     
ಸುತೆಯಾಗಿ, ಸಹೋದರಿಯಾಗಿ                                                     
ಮನೆ ಬೆಳಗುವಳು ಹೆಣ್ಣು
ಸದಾ ಇತರರ ಏಳ್ಗೆಯನ್ನೇ
ಬಯಸುವ ನಾರಿ
’ಕ್ಷಮಯಾಧರಿತ್ರಿ’ಯಾಗಿ
ನಗುನಗುತಾ ಮನೆಮಂದಿಗೆಲ್ಲ
ಉಣಬಡಿಸುವಳು ಉದರತುಂಬಾ
ಅನ್ನಪೂರ್ಣೆಯಾಗಿ
ಇಂತಹ ಸ್ತ್ರೀಗೆ
ಇಂದೇಕೆ ಬಂತೀ ದುರ್ಗತಿ?
ದಿನವೂ ಆಕೆಯ ಮೇಲೆ
ನಡೆಯುತಿಹ
ಅವ್ಯಾಹತ ಅತ್ಯಾಚಾರ
ಸಾರುತಿದೆ ದೇಶದಲಿಂದು
ಆಕೆಯ ಸ್ಥಿತಿಗತಿ!




ಹವ್ಯಾಸ


ಬದುಕಿನಲಿ ಮಾಡದಿರಿ
ದುಷ್ಟರ ಸಹವಾಸ
ಬದಲಾಗಿ ಬೆಳೆಸಿಕೊಳ್ಳಿ
ಉತ್ತಮ ಹವ್ಯಾಸ
ಇದರಿಂದ ಮೂಡುವುದು
ಬಾಳಿನಲಿ ಸಂತಸ!

ಕಾಮೆಂಟ್‌ಗಳು