ಗೊರಕೆ ಪುರಾಣ
’ಗೊರಕೆ’ ಎಂಬ ಪದ ತಳ್ಳುವುದು ಎಲ್ಲರನ್ನೂ ದೂರದೂರಕೆ. ಏಕೆಂದರೆ ನಿದ್ದೆ ಹೋದಾಗ ಗೊರಕೆ ಮಲ್ಲರಿಗೆ ತಿಳಿಯಲ್ಲೊಲ್ಲದು, ತಾವು ಗೊರಕೆ ಹೊಡೆಯುತ್ತಾ ಅಕ್ಕಪಕ್ಕದಲ್ಲಿ ಮಲಗಿರುವವರು ಕಿವಿಯನ್ನು ಬೋರ್ವೆಲ್ ಕೊರೆದಂತೆ ತೂತು ಕೊರೆಯುತ್ತಿದ್ದೇವೆಂದು. ಹೀಗಾಗಿ ಗೊರಕೆ ಮಲ್ಲರ ಪಕ್ಕದಲ್ಲಿ ನಿದ್ರಿಸಲು ಹಿಂದೇಟು ಹಾಕುವವರೇ ಹೆಚ್ಚು. ಅಕಸ್ಮಾತ್ ಆ ಬಗ್ಗೆ ಗೊತ್ತಿಲ್ಲದೆ ಅವರ ಬಳಿ ಮಲಗಿದರೆ ಮಾರನೇ ದಿನ "ಎಂತದ್ದು ಮಾರಾಯಾ..... ಇಷ್ಟೊಂದು ಗೊರಕೆ ಹೊಡೆಯುತ್ತೀಯಾ. ನೀನೂಂತ ಗೊತ್ತೇ ಇರಲಿಲ್ಲ. ರಾತ್ರಿ ಎಲ್ಲ ನನಗೆ ನಿದ್ದೆಯೇ ಬರಲಿಲ್ಲ, ನಿನ್ನ ಗೊರಕೆ ಸದ್ದಿನಿಂದ" ಎಂದು ಬೇಸರದಿಂದ ನುಡಿಯುವುದಿದೆ.
ಆದರೆ ಗೊರಕೆ ಹೊಡೆಯುವವರು "ಹೌದಾ! ನಾನು ಗೊರಕೆಹೊಡೆಯುತ್ತಿದ್ದೆನಾ? ನನಗೆ ಗೊತ್ತಿಲ್ಲಪ್ಪ!" ಎನ್ನುತ್ತಾರೆ, ಇನ್ನು ಕೆಲವರು "ಅಬ್ಬ! ಒಳ್ಳೇ ನಿದ್ದೆ ಬಂತಪ್ಪಾ. ಈಗೆಷ್ಟೋ ಹಾಯೆನಿಸುತ್ತದೆ" ಎನ್ನುತ್ತಾರೆ ಬೇಕಾಬಿಟ್ಟಿ ಗೊರಕೆ ಹೊಡೆದು ನಿದ್ದೆಯಿಂದೆದ್ದ ಮೇಲೆ. ಪಾಪ! ಪಕ್ಕದಲ್ಲಿ ಮಲಗಿದ್ದ ಬಡಪಾಯಿ ಇದರಿಂದ ಅದೆಷ್ಟು ತೊಂದರೆ ಅನುಭವಿಸಿದ ನಿದ್ದೆ ಬಾರದೆ ತೊಳಲಾಡುತ್ತಾ ಎಂದು ಅವರಿಗೇನು ಗೊತ್ತು?
ಈ ಗೊರಕೆ ಎಂಬ ಪದದಿಂದ ಹೆಚ್ಚು ತತ್ತರಿಸುವವರೆಂದರೆ ಗೊರಕೆ ಮಲ್ಲ ಗಂಡನ ಬಳಿ ಮಲಗುವ ಮಡದಿ ಅಥವಾ ಗೊರಕೆ ಮಲ್ಲಿ ಮಡದಿಯ ಬಳಿ ಮಲಗುವ ಗಂಡನೇ ಇರಬಹುದೆನಿಸುತ್ತದೆ. ಇದರಿಂದಾಗುವ ಅನಾಹುತಗಳು ಒಂದೇ ಎರಡೇ? ಕೆಲ ದಿನಗಳ ಹಿಂದೆ ಪತಿಯ ಗೊರಕೆ ಸದ್ದನ್ನು ಸಹಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಆತನಿಗೆ ವಿಚ್ಛೇದನ ನೀಡಿದ ಪತ್ನಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಗೊರಕೆಯು ಇಷ್ಟೊಂದು ವಿಪರೀತಕ್ಕೆ ಹೋಗುವುದೆಂದರೆ ಅದರ ತೀವ್ರತೆ ಎಷ್ಟಿರಬಹುದು? ನೀವೇ ಊಹಿಸಿ.
ಗೊರಕೆ ಎಂಬುದು ಗಾಢ ನಿದ್ದೆಯ ಲಕ್ಷಣವಂತೆ. ಲಕ್ಷಣವೋ ಇಲ್ಲ ಅವಲಕ್ಷಣವೋ! ನಿಕಟವರ್ತಿಗಳಿಗೆ ಇದರಿಂದ ತಾಪತ್ರಯವೇ ಹೆಚ್ಚು. ಇತ್ತೀಚೆಗೆ ಪರಿಚಿತರೊಬ್ಬರ ಮನೆಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದೆ. ರಾತ್ರಿ ತುಂಬಾ ತಡವಾಯಿತೆಂದು ಅಂದು ಅಲ್ಲೇ ತಂಗಿದ್ದೆ. ಹೆಂಗಸರೆಲ್ಲಾ ತಮ್ಮ ಮಕ್ಕಳೊಂದಿಗೆ ಒಳಗಿನ ಕೊಠಡಿಯಲ್ಲಿ ಮಲಗಿದ್ದರೆ ಗಂಡಸರು ಹೊರಗಿನ ಚಾವಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದರು. ಇದ್ದಕ್ಕಿದ್ದಂತೆ ಹೊರಗಿನಿಂದ "ಗೊರ್ರ್.....ಗೊರ್ರ್......" ಎಂಬ ಸದ್ದು ಕೇಳಿ ಬರಲಾರಂಭಿಸಿತ್ತು. ತಕ್ಷಣ ಮೂರು ವರ್ಷದ ಸುಧಾಳು "ಅಮ್ಮಾ ಅದೇನಮ್ಮಾ ಸದ್ದು? ನನಗೆ ತುಂಬ ಭಯವಾಗುತ್ತಿದೆಯಮ್ಮಾ... ನಾನು ಹೋಗಿ ಅಪ್ಪನ ಬಳಿ ಮಲಗುತ್ತೇನಮ್ಮಾ...." ಎಂದು ಅಳಲಾರಂಭಿಸಿದಳು.
"ಅಯ್ಯೋ ಪೆದ್ದೀ.... ಗೊರಕೆ ಸದ್ದು... ನಿಮ್ಮಪ್ಪಾನೇ ಗೊರಕೆ ಹೊಡೆಯುತ್ತಿರುವುದು....." ಎಂದು ಆಕೆಯ ತಾಯಿ ನುಡಿದಾಗ ಆಕೆ ಪಾಪ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗಿದ್ದಳು.
"ಎರಡು ವಾರಗಳ ಹಿಂದೆ ಮನೆ ಕಾವಲಿಗೆಂದು ಕೆಲಸದ ಆಳೊಬ್ಬನನ್ನು ಕೂರಿಸಿ ನಾವು ಮನೆಯವರೆಲ್ಲಾ ನೆರೆಯೂರಲ್ಲಿದ್ದ ಬಂಧುಗಳ ಮನೆಗೆ ಮದುವೆಗೆಂದು ತೆರಳಿದ್ದೆವು. ರಾತ್ರಿ ಈತನ ಗೊರಕೆ ಸದ್ದು ಕೇಳಿಸಿ ಚೆನ್ನಾಗಿ ನಿದ್ದೆ ಮಾಡಿರುವುದನ್ನು ಖಾತ್ರಿ ಮಾಡಿಕೊಂಡು ಅಂಗಳದಲ್ಲಿದ್ದ ಅಡಿಕೆಯನ್ನೆಲ್ಲಾ ಕಳ್ಳರು ಹೊತ್ತೊಯ್ದಿದ್ದಾರೆ. ಈತನೋ... ರಾತ್ರಿ ಮಲಗಿದನೆಂದರೆ ಗೊರಕೆ ಸದ್ದು ಹಿಂದಿನ ರಸ್ತೆಯವರೆಗೂ ಕೇಳಿಸುತ್ತದೆ. ಅಂತಹ ಗೊರಕೆ ಪಾರ್ಟಿ ಇವನು. ಒಟ್ನಲ್ಲಿ ನಮಗೆ ಪಂಗನಾಮ ಬಿತ್ತು" ಎಂದು ಇತ್ತೀಚೆಗೆ ಊರವರೊಬ್ಬರು ಬೇಸರ ತೋಡಿಕೊಂಡಿದ್ದರು.
ಅದೊಂದು ದಿನ ರಾತ್ರಿ ಹೊತ್ತು ಬಸ್ಸಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಶಿರಾಡಿ ಘಾಟಿನಲ್ಲಿ ಬಸ್ ಇದ್ದಕಿದ್ದಂತೆ ನಿಂತು ಬಿಟ್ಟಿತ್ತು. ಬಸ್ ಚಾಲಕ ಹಾಗೂ ನಿರ್ವಾಹಕರು ಕೆಳಗಿಳಿದು ಏನಾಯಿತೆಂದು ಪರೀಕ್ಷಿಸುತ್ತಿದ್ದರು. ಸೊಳ್ಳೆಗಳ ಕಾಟದಿಂದ ನಿದ್ದೆ ಮಾಡಲಾಗದೆ ಎಲ್ಲರೂ ಪರದಾಡುತ್ತಿದ್ದರೆ ಮುಂದಿನ ಆಸನದಲ್ಲಿ ಆಸೀನರಾಗಿದ್ದವರೊಬ್ಬರು "ಗೊರ್ರ್.....ಗೊರ್ರ್......." ಎಂದು ಜೋರಾಗಿ ಗೊರಕೆ ಹೊಡೆಯುತ್ತಿದ್ದರು. ಆಗ ಸಹಪ್ರಯಾಣಿಕರೊಬ್ಬರು "ಪುಣ್ಯಾತ್ಮನ ಗೊರಕೆ ಸದ್ದಿಗೆ ಸೊಳ್ಳೆಗಳೂ ಪಾಪ ಹತ್ತಿರ ಸುಳಿಯಲು ಭಯ ಪಡುತ್ತವೆ ಎನಿಸುತ್ತದೆ. ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಿದ್ದಾರಲ್ಲಾ...... ಎಲ್ಲಾದಕ್ಕೂ ಪಡ್ಕೊಂಡು ಬಂದಿರಬೇಕು" ಎಂದು ಮೆತ್ತಗೆ ಉದ್ಗರಿಸಿದ್ದರು.
ವಾರದ ಹಿಂದೆ ನಾಮಕರಣಕ್ಕೆಂದು ಗೆಳತಿ ಮನೆಗೆ ತೆರಳಿದ್ದೆ. ಮಧ್ಯಾಹ್ನ ಊಟ ಮುಗಿಸಿ ಅದೂ ಇದೂ ಮಾತಾಡುತ್ತಾ ಕುಳಿತ್ತಿದ್ದೆವು. ಅಷ್ಟರಲ್ಲಿ ರೂಮಲ್ಲಿ ಮಲಗಿದ್ದ ಆಕೆಯ ಅಜ್ಜಿ ಗೊರಕೆ ಹೊಡೆಯಲಾರಂಭಿಸಿದ್ದರು. "ಇದೇನಿದು ಅಜ್ಜಿ ಈ ಮಧ್ಯಾಹ್ನದ ಹೊತ್ತೂ ಇಷ್ಟೊಂದು ಗೊರಕೆ ಹೊಡೆಯುತ್ತಿದ್ದಾರೆ?" ಒಬ್ಬರು ಪ್ರಶ್ನಿಸಲು "ಅಯ್ಯೋ ಗೊರಕೆಗೇನು ಗೊತ್ತು ಹಗಲು ಹೊತ್ತು ಯಾವುದು? ರಾತ್ರಿ ಹೊತ್ತು ಯಾವುದೂಂತ" ಎಂದಿದ್ದರು ಮತ್ತೊಬ್ಬರು. ಅದೂ ಹೌದಲ್ಲವೇ? ಒಪ್ಪತಕ್ಕ ವಿಷಯವೆಂದುಕೊಂಡೆ ನಾನು ಮನದಲ್ಲಿ.
ಕೆಲವರಿಗೆ ಎಲ್ಲಿಯೇ ಮಲಗಿದರೂ ಸರಿ ಬೇಗನೇ ನಿದ್ದೆಯಾವರಿಸುತ್ತದೆ. ಎಂತಹ ಗೌಜಿ ಗದ್ದಲಗಳಿದ್ದರೂ ಅಂತಹವರು ನಿದ್ರಿಸುತ್ತಾರೆ ಹಾಯಾಗಿ "ಚಿಂತೆಯಿಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ" ಎಂಬಂತೆ. ಆದರೆ ಇನ್ನು ಕೆಲವರಿಗೆ ಎಂತಹ ಅರಮನೆಯೊಳಗೆ ಡನ್ಲಪ್ ಹಾಸಿಗೆಯಲ್ಲಿ ಮಲಗಿ ಹೊರಳಾಡಿದರೂ ನಿದ್ದೆಯೆಂಬುದು ಹತ್ತಿರವೇ ಸುಳಿಯುವುದಿಲ್ಲ. ಇದೆಂತಹಾ ವಿಪರ್ಯಾಸವಲ್ಲವೇ? ಹೀಗಾಗಿ ಗೊರಕೆ ಹೊಡೆಯುತ್ತಾ ಗಾಢ ನಿದ್ದೆ ಮಾಡುವವರನ್ನು ಕಂಡರೆ ಕರುಬುವವರೂ ಇದ್ದಾರೆ.
"ಗೊರಕೆ ಹೊಡೆಯುತ್ತಾ ನಿದ್ದೆ ಮಾಡುವ ಸವಿ ಬಲ್ಲವರೇ ಬಲ್ಲರು" ಎಂಬಂತೆ ಅಂತಹ ಗಾಢ ನಿದ್ದೆಗೆ ಅರ್ಧ ಘಂಟೆ ಶರಣಾದರೂ ಸಾಕು, ದೇಹದ ಸುಸ್ತೆಲ್ಲಾ ಮಾಯವಾಗುವುದು ಎನ್ನುತ್ತಾರೆ ಕೆಲವರು. ಒಟ್ಟಿನಲ್ಲಿ ಗೊರಕೆಯೊಂದು ಸರ್ವಾಂತರ್ಯಾಮಿ. ’ಬಿಟ್ಟೆನೆಂದರೂ ಬಿಡದೀ ಮಾಯೇ’ ಎಂಬಂತೆ ಬೇಡ ಬೇಡವೆಂದರೂ ಮನುಷ್ಯರನ್ನು ಕಾಡುವ ಆಸಾಮಿ!!!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ