"ಸೀರೇ...ಸೀರೇ.. ಇನ್ನೂರು ರೂಪಾಯಿ ಸೀರೇ ಎರಡು ಕೊಂಡರೆ ಒಂದು ಉಚಿತ" ಎಂದು ಕೂಗುತ್ತಾ ಬರುತ್ತಿದ್ದ ಸೀರೆ ಮಾರುವಾತನನ್ನು ಕಂಡು, ಹೂಂ ಎರಡು ಸೀರೆ ಕೊಂಡರೆ ಒಂದು ಸೀರೆ ಉಚಿತ, ಒಂದು ಮದುವೆಯಾದರೆ ಒಂದು ಮಗು ಉಚಿತ, ಎರಡು ಕೆಜಿ ಅಕ್ಕಿ ಕೊಂಡರೆ ಅರ್ಧ ಕೆಜಿ ಕಲ್ಲು ಉಚಿತ, ಒಂದು ಲೀಟರ್ ಹಾಲು ಕೊಂಡರೆ ಅರ್ಧ ಲೀಟರ್ ನೀರು ಉಚಿತ ಒಟ್ಟಿನಲ್ಲಿ ಇವತ್ತು ಏನೇ ಖರೀದಿಸಿದರೂ ಅದಕ್ಕೆ ಏನಾದರೂ ಉಚಿತ ಅಂತಿದ್ದೇ ಇರ್ತದೆ ನೋಡಿ" ಎನ್ನುತ್ತಾ ಕಣ್ಣು ಮಿಟುಕಿಸಿದ ಸುಮಿಗೆ ಅದೆಲ್ಲಾ ಸರಿ ಆದರೆ ಸೀರೆ ನೋಡಲು ಸುಂದರವಾಗೇ ಕಾಣಿಸುತ್ತಿದೆ ಬಾ ಸ್ವಲ್ಪ ಸೀರೆ ನೋಡೋಣ" ಎನ್ನುತ್ತಾ ’ಏ ಸೀರೆ... ಬಾರಪ್ಪಾ ಇಲ್ಲಿ’ ಎಂದು ಕೂಗಿದೆ.
ಸಿಟೌಟಿನಲ್ಲಿ ಕುಳಿತು ಸೀರೆ ಮೂಟೆ ಬಿಚ್ಚಿದ ವ್ಯಾಪಾರಿ ಒಂದೊಂದಾಗಿ ಸೀರೆಗಳನ್ನು ಬಿಚ್ಚಿ ತೋರಿಸತೊಡಗಿದ. " ಈ ಸೀರೆ ನೋಡಕ್ಕಾ.... ಇದು ಸಾವಿತ್ರಿ ಸೀರೆ, ಇದು ಅರುಂಧತಿ ಸೀರೆ, ಇದು ರಾಧಾ ಕಲ್ಯಾಣದಲ್ಲಿ ರಾಧಿಕಾ ಉಟ್ಟುಕೊಳ್ಳುತ್ತಾರಲ್ಲಾ ಆ ಸೀರೆ. ತಗೊಳ್ಳೀ ಅಕ್ಕಾ ಇದು ನಿಮಗೆ ಚೆನ್ನಾಗಿ ಒಪ್ಪುತ್ತದೆ. ಎರಡು ತಗೊಳ್ಳಿ ಆಗ ಒಂದು ಸೀರೆ ಉಚಿತ ಸಿಗುತ್ತದೆ ನೋಡಿ" ಆತ ಒಂದೇ ಸಮನೆ ನಮ್ಮಲ್ಲಿ ಗೋಗರೆಯಲಾರಂಭಿಸಿದಾಗ ಹೇಗೂ ಹಬ್ಬಗಳು ಸಾಲಾಗಿ ಬರ್ತಿವೆಯಲ್ಲಾ ಉಟ್ಟುಕೊಳಲ್ಲು ಬೇಕಾಗುತ್ತವೆ ಎಂದುಕೊಂಡು ಎರಡು ಸೀರೆ ಖರೀದಿಸಿದೆ. "ಸೀರೆಗಳು ಚೆನ್ನಾಗಿವೆ" ಎಂದು ಸುಮಿಯೂ ಸರ್ಟಿಫಿಕೇಟ್ ನೀಡಿದಾಗ ಖುಷಿಗೊಂಡೆ.ಮಧ್ಯಾಹ್ನ ಬಟ್ಟೆಗಳನ್ನು ಒಗೆದು ಅಂಗಳದಲ್ಲಿ ಒಣಗಲು ಹಾಕುತ್ತಿದ್ದಾಗ "ಮ್ಯಾಡಮ್" ಎಂದು ಯಾರೋ ಕರೆದಂತಾಯಿತು. ಹಿಂತಿರುಗಿ ನೋಡಲು ಏರಡು ಆಕರ್ಷಕವಾದ ವಾಚ್ಗಳನ್ನು ಹಿಡಿದು ನಿಂತಿದ್ದಳು ಸೇಲ್ಸ್-ಗರ್ಲ್. "ನೋಡಿ ಮ್ಯಾಡಮ್, ಹೊಸ ವರ್ಷದ ಪ್ರಯುಕ್ತ ಲ್ವೆಮೆಕ್ಸ್ ಕಂಪೆನಿಯವರು ಹೊಸ ಮಾದರಿಯ ವಾಚ್ಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಅದೂ ಮಾರ್ಕೆಟಿಂಗ್ ಇಂಪ್ರೂವ್ ಮಾಡಲೋಸ್ಕರ ಆರಂಭದಲ್ಲಿ ಒಂದು ಜಂಟ್ಸ್ ವಾಚ್ ಕೊಂಡವರಿಗೆ ಒಂದು ಲೇಡೀಸ್ ವಾಚ್ ಉಚಿತವಾಗಿ ಕೊಡುತ್ತಿದ್ದಾರೆ ಬರೀ ಇನ್ನೂರು ರೂಪಾಯಿಗೆ. ತಗೊಳ್ಳಿ ಮ್ಯಾಡಮ್ ಬಿಟ್ಟರೆ ಮತ್ತೆ ಇಂತಹ ಆಫರ್ ಸಿಗಲ್ಲ. ನಿಮ್ ಹಸ್ಬೆಂಡ್ಗೆ ಉಡುಗೊರೆಯಾಗಿ ಕೊಡಿ. ಜೊತೆಯಲ್ಲೇ ನಿಮಗೂ ಒಂದು ವಾಚ್ ದೊರೆಯುತ್ತದಲ್ಲಾ" ಆಕೆಯ ಮಾತುಗಳಿಂದಲೂ ವಾಚ್ ನನ್ನನ್ನು ಸೆಳೆದಿತ್ತು. ಇನ್ನೂರು ರೂಪಾಯಿ ನೀಡಿ ಖರೀದಿಸಿಯೇ ಬಿಟ್ಟೆ. ಗೋಲ್ಡ್ ಪ್ಲೇಟೆಡ್ ವಾಚ್ಗೆ ಕಂದುಬಣ್ಣದ ಬೆಲ್ಟ್! ಕಾಂಬಿನೇಶನ್ ಅದ್ಭುತವೆನಿಸಿತ್ತು. ಕೈಗೆ ಕಟ್ಟಿ ನೋಡಿ ಸಂಭ್ರಮಿಸಿದೆ.
ಇನ್ನೇನು ಮಗಳು ಸ್ಕೂಲಿಂದ ಬರುವಷ್ಟರಲ್ಲಿ ಕೊಂಚ ಸಾಮಾನು ತಂದುಬಿಡೋಣವೆಂದುಕೊಂಡು ಅಂಗಡಿಯತ್ತ ಹೆಜ್ಜೆ ಹಾಕಿದೆ "ಏನೇನು ಕೊಡ್ಲಿ ಮ್ಯಾಡಂ?" ಅಂಗಡಿಯಾತ ಪ್ರಶ್ನಿಸಿದ. "ಒಂದು ಕೆಜಿ ಬನ್ಸಿರವೆ, ಎರಡು ಬಟ್ಟೆ ಸೋಪು, ಒಂದು ಲಕ್ಸ್" ಎಂದೆ.
"ಸ್ನಾನದ ಸೋಪು ಇದು ಕೊಡಲೇ? ಇವು ಎರಡು ಕೊಂಡರೆ ಒಂದು ಪೆನ್ ಉಚಿತ". "ಸರಿ ಕೊಡಪ್ಪಾ" ಎನ್ನುತ್ತಾ ಎಲ್ಲವನ್ನೂ ಕೊಂಡುಕೊಂಡು ಮನೆಗೆ ನಡೆದೆ.
ಮಗಳ ಕೈಗೆ ಪೆನ್ನಿತ್ತು "ತಗೋ ನಿನಗೆ ಹೊಸ ಪೆನ್ನು" ಎಂದೆ. "ವಾವ್! ಚೆನ್ನಾಗಿದೇಮ್ಮಾ" ಎನ್ನುತ್ತಾ ಪುಸ್ತಕ ತೆಗೆದು ಬರೆಯಲಾರಂಭಿಸಿದಾಕೆ "ಅಯ್ಯೋ ಈ ಪೆನ್ನು ಬರೀತಾ ಇಲ್ಲಮ್ಮಾ...." ಎಂದು ರಾಗವೆಳೆದಳು. ಉಚಿತವಾಗಿ ದೊರೆತಿದ್ದು ಇನ್ನು ಹೆಂಗಿರುತ್ತದೆ ಮೂರು ರೂಪಾಯಿ ಪೆನ್ನು ತಾನೇ ಎಂದುಕೊಂಡು ಸುಮ್ಮನಾದೆ.
ಸಂಜೆ ಯಜಮಾನರು ಕಚೇರಿಯಿಂದ ಬರುತ್ತಿದ್ದಂತೆ ಕಾಫಿ ನೀಡಿ ಕೈ ಮುಂದೆ ಮಾಡಲು ಹೇಳಿದೆ. ಬಲು ಖುಷಿಯಿಂದ ವಾಚ್ ಕಟ್ಟಿ "ಹ್ಯಾಗಿದೆ ನೋಡಿ?" ಕೇಳಿದೆ. ಒಂದು ಬಾರಿ ಅದನ್ನು ಹಿಂದೆ ಮುಂದೆ ಸರಿಸಿದರು. ಅಷ್ಟರಲ್ಲಿ ವಾಚ್ ಹಾಗೂ ಬೆಲ್ಟ್ ಕಳಚಿಕೊಂಡು ಬಿದ್ದುಬಿಟ್ಟಿತು. "ಏನಿದು ಈ ಗುಜರಿ ವಾಚ್ ಎಲ್ಲಿ ಸಿಕ್ಕಿತು?" ಎಂದವರಿಗೆ ವಿಷಯವನ್ನೆಲ್ಲಾ ಅರುಹಿದಾಗ, "ನಿನ್ನ ಕೈಗೆ ದುಡ್ಡು ತಂದುಕೊಡುವುದೇ ತಪ್ಪು. ಇನ್ಮೇಲೆ ತಿಂಗ್ಳು ತಿಂಗ್ಳು ಹೆಂಡ್ತೀಗೆ ಸಂಬ್ಳ ಕೊಡ್ಬೇಕೂಂತ ಕಾನೂನು ಬರುತ್ತದಂತೆ ನೋಡು. ಅದನ್ನು ಮಾತ್ರಾ ನಿನ್ನ ಖಾತೆಗೆ ಹಾಕಿಬಿಡುತ್ತೇನೆ ಅಷ್ಟೇ ನೋಡು. ರಸ್ತೇಲಿ ಮಾರುತ್ತಾ ಬಂದದ್ದನ್ನೆಲ್ಲಾ ಖರೀದಿಸಿ ಸುಮ್ಮನೇ ದುಡ್ಡು ಹಾಳು ಮಾಡ್ತೀಯ..." ಎನ್ನುತ್ತಾ ಲಲಿತಾ ಸಹಸ್ರನಾಮ ಪ್ರಾರಂಭಿಸಿಯೇಬಿಟ್ಟರು. ಅಯ್ಯೋ ಇಂದು ಉಚಿತವೆಂದು ಕೊಂಡದ್ದೆಲ್ಲಾ ವ್ಯರ್ಥವಾಗುತ್ತಿದೆಯಲ್ಲಾ ಎಂದು ಹಣೆಚಚ್ಚಿಕೊಂಡೆ.
ಮಾರನೇ ದಿನ ಹಬ್ಬವಿದ್ದುದರಿಂದ ಮಡಿಗೆ ಉಟ್ಟುಕೊಳ್ಳಲು ಇರಲಿ ಎಂದು ಅಂದು ತಾನೇ ಕೊಂಡಿದ್ದ ಹೊಸ ಸೀರೆಯೊಂದನ್ನು ನೀರಿಗೆ ಹಾಕಿ ತೆಗೆದೆ. ನೀರೆಲ್ಲಾ ಹಸುರು ಬಣ್ಣಕ್ಕೆ ತಿರುಗಿ ಸೀರೆ ಮಾತ್ರ ಪೇಲವಗೊಂಡಿತ್ತು. ಯಜಮಾನರಿಗೆ ತಿಳಿದರೆ ಇನ್ನು ಎಲ್ಲಿ ವಿಷ್ಣುಸಹಸ್ರನಾಮವನ್ನೂ ಪ್ರಾರಂಭಿಸಿಯಾರೋ ಎಂದು ಭಯಗೊಂಡು "ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲೀ..." ಎಂದು ಗುನುಗುತ್ತಾ ಸದ್ದಾಗದಂತೆ ಬಕೆಟ್ನಲ್ಲಿದ್ದ ನೀರನ್ನೆಲ್ಲಾ ಚೆಲ್ಲಿ ಸೀರೆಯನ್ನು ಮೆತ್ತಗೆ ಮಹಡಿ ಮೇಲೆ ಕೊಂಡೊಯ್ದು ಒಣಗಹಾಕಿದೆ.
ಮನೆ ಖರ್ಚಿಗೇಂತ ಕೊಟ್ಟ ದುಡ್ಡಲ್ಲಿ ಮೂರು ತಿಂಗಳಿಂದ ಸ್ವಲ್ಪ ಸ್ವಲ್ಪವೇ ಉಳಿಸಿ ಕೂಡಿಟ್ಟ ಹಣವೆಲ್ಲಾ ಒಂದೇ ದಿನ ನೀರಲ್ಲಿ ಹೋಮ ಮಾಡಿದಂತೆ ಕರಗಿಹೋಯಿತಲ್ಲಾ ಎಂದು ವ್ಯಥೆಯಾಯಿತು. "ಉಚಿತ ಎಂಬ ಪದಕ್ಕೆ ಮಾರುಹೋದರೆ ಗ್ರಾಹಕರು ಮೋಸ ಹೋಗುವುದು ಖಚಿತ ಕಣೇ ಶಿಬಿ" ಎಂದು ಗೆಳತಿ ಶಮ್ಮಿ ನೀಡಿದ್ದ ಉಚಿತ ಸಲಹೆ ಮಾತ್ರ ನಿಜವಾಗಿತ್ತು. "ಉಚಿತ ಉಚಿತ" ಎನ್ನುತ್ತಾ ವ್ಯಾಪಾರ ನಡೆಸುವ ಬೀದಿ ವ್ಯಾಪಾರಗಳಿಂದ ಏನನ್ನೂ ಕೊಳ್ಳಬಾರದೆಂಬುದು ನನಗೆ ಅಂದು ವೇದ್ಯವಾಯಿತು!!
copyright20/6/15geethabarlaamai
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ