ಪ್ರಕಟಗೊಂಡಂತಹ ಕೆಲ ಲೇಖನಗಳು

ಮನ ಮುದಗೊಳಿಸುವ ಶಿರಾಡಿ ಘಾಟ್ 

ಹಸಿರು ಸಿರಿಯ ಮಡಿಲಿನಿಂದ
ಗಿರಿ ಶಿಖರಗಳ ಒಡಲಿನಿಂದ
ಜುಳುಜುಳು ನಿನಾದಗೈದು
ಹರಿದು ಬರುತಿದೆ||
ಹಾಲ್ನೊರೆಯು ಉಕ್ಕಿದಂತೆ
ನವಿಲು ಗರಿಯ ಬಿಚ್ಚಿದಂತೆ
ನೋಡುಗರ ಮನವ ತಾನು
ಸೂರೆಗೊಳುತಿದೆ||
ಹೆಬ್ಬಂಡೆಗಳ ನಡುವೆ ಸಾಗಿ
ಬಳುಕಿ ನಾಟ್ಯಗೈವ ಪರಿಯು
ನಾಟ್ಯರಾಣಿ ಶಾಂತಲೆಯೂ
ನಾಚುವಂತಿದೆ||
ಮಳೆಗಾಲದಿ ಮೈದುಂಬಿ
ಮನಕೆ ಮುದವ ನೀಡುತಲಿ
ಪ್ರವಾಸಿಗರ ತನ್ನ ಕಡೆಗೆ
ಕೂಗಿ ಕರೆದಿದೆ||



ಹಸಿರು ಸಿರಿಯ ಶಿರಾಡಿ ಘಾಟ್ ಪ್ರಕ್ರುತಿ ಪ್ರಿಯರಿಗೆ ಬಹಳ ಇಷ್ಟವಾಗುವ ತಾಣ. ಅದರಲ್ಲೂ ಮಳೆಗಾಲದಲ್ಲಿ ಈ ತಾಣವನ್ನು ನೋಡಿ ಆನಂದಿಸಿದವರೇ ಬಲ್ಲರು ಇದರ ಸೌಂದರ್ಯವನ್ನು. ಅದಕ್ಕಾಗಿಯೇ ಜುಲೈನಲ್ಲಿ ಎಂದರೆ ಜೋರಾಗಿ ಮಳೆಯಾಗುವ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹಗಲು ಹೊತ್ತಿನಲ್ಲಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸಬೇಕೆಂದು ಬಹಳ ದಿವಸಗಳಿಂದ ಕಾಯುತ್ತಿದ್ದೆ. ಆ ಸುಸಮಯ ಕೂಡಿ ಬಂದಿತ್ತು.

ಪುತ್ತೂರು ಸಮೀಪದ ನಮ್ಮ ಹಿರಿಮನೆಯಲ್ಲಿ ಆಟಿ ಪೂಜೆಗೆ ಊರಿನಿಂದ ಆಹ್ವಾನ ಬಂದಿತ್ತು. "ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ" ಎಂಬಂತೆ ತಕ್ಷಣ ಹೊರಟು ನಿಂತಿದ್ದೆ. ಯಶವಂತಪುರದಿಂದ ಬೆಳಗ್ಗೆ ೭-೩೦ಕ್ಕೆ ಹೊರಟು ಅರಸೀಕೆರೆ, ಸಕಲೇಶಪುರ ಮಾರ್ಗವಾಗಿ ಸಾಗುವ ಕಾರವಾರ ಎಕ್ಸ್ಪ್ರೆಸ್ ರೈಲು ದೋಣಿಗಲ್,ಎಡಕುಮೇರಿ ಮೂಲಕ ಸಾಗಿ ಸುಬ್ರಹ್ಮಣ್ಯ ತಲುಪುವ ತನಕವೂ ಕಾಣಸಿಗುವ ಹಸಿರು ವನಸಿರಿಯ ಅಂದವ ಬಣ್ಣಿಸಲಸಾಧ್ಯ!

ಸಕಲೇಶಪುರದಲ್ಲಿ ಮಧ್ಯಾಹ್ನದ ಊಟ  ಮುಗಿಸಿ ರೈಲು ಮುಂದಕ್ಕೆ ಸಾಗಿದಾಗ ಸುರಿಯಲಾರಂಭಿಸಿದ ಜಿಟಿಜಿಟಿ ಮಳೆ ಮನಸ್ಸಿಗೆ ಮುದ ನೀಡುತ್ತಿತ್ತು. ಕಿಟಕಿ ಮೂಲಕ ಹೊರ ವೀಕ್ಷಿಸಿದರೆ ಒಂದೆಡೆ ಬೆಟ್ಟ-ಗುಡ್ಡಗಳ ಸಾಲು, ಇನ್ನೊಂದು  ಕಡೆ ಆಳವಾದ ಪ್ರಪಾತ! ನಡುವೆ ಹಾವಿನಂತೆ ಹಾದುಹೋಗುವ ರೈಲು ಮಾರ್ಗ! ನಡುನಡುವೆ ಬೆಟ್ಟದಿಂದ ಧೋ ಎಂದು ಧುಮ್ಮಿಕ್ಕುವ ಜಲಧಾರೆಗಳು ಒಂದೆಡೆಯಾದರೆ ಆಳವಾದ ಪ್ರಪಾತದಲ್ಲಿ ಸಾಲು ಸಾಲು ಹಸಿರು ಗಿಡ-ಮರಗಳು. ಎಲ್ಲೆಲ್ಲೂ ಹಸಿರುಟ್ಟು ನಗುವ ಪ್ರಕ್ರುತಿ ವನಸಿರಿ. ಮೇಲೆ ಆಗಸದಲ್ಲಿ ಗಿಡಮರಗಳನ್ನು ಚುಂಬಿಸುತ್ತಿರುವಂತೆ ಭಾಸವಾಗುವ ಮೋಡಗಳು. ಗಾಳಿಯಲ್ಲಿ ತೇಲುವಂತೆ ಭಾಸವಾಗುತ್ತಿದ್ದ ಹೊಗೆಯಂತಹ ಮೋಡಗಳು ಇಲ್ಲಿ ಅದ್ಭುತ ಲೋಕವನ್ನೇ ಸ್ರುಷ್ಟಿಸಿದ್ದವು.

 ಎಂತಹ ಅರಸಿಕರನ್ನೂ ಕವಿಯಾಗಿಸಬಲ್ಲ ರಮ್ಯನೋಟ! ಮೋಡ ಹಾಗೂ ಮರಗಳ ನಡುವಿನ ಈ ಸರಸ-ಸಲ್ಲಾಪವನ್ನು ಎಲ್ಲರೂ ಕ್ಯಾಮರಾದಲ್ಲಿ ಸೆರೆಹಿಡಿಯುವುದರಲ್ಲಿ   ನಿರತರಾಗಿದ್ದಾಗ ಎದುರಾಗಿತ್ತು ಮೊದಲ ಸುರಂಗ ಮಾರ್ಗ. ರೈಲು ಕತ್ತಲಿನಲ್ಲಿ ಹಾದುಹೋಗುವಾಗ ಒಳಗಿದ್ದ ಪ್ರಯಾಣಿಕರೆಲ್ಲ ಒಕ್ಕೊರಲಿನಿಂದ ’ಹೋ’ ಎಂದು ಕಿರುಚಿಕೊಳ್ಳಲು ಮತ್ತೆ ಬೆಳಕು ಮೂಡಿದಾಗ ಎಲ್ಲರ ಮೊಗದಲ್ಲೂ ಮಂದಹಾಸ ಮಿನುಗಿತ್ತು. ಅಷ್ಟರಲ್ಲಿ ಎದುರಾಗುತ್ತಿದ್ದ ಮಿನಿ ಜಲಧಾರೆಗಳು ಬಹಳಷ್ಟು. ಒಂದಾದ ಮೇಲೊಂದರಂತೆ ಅಲ್ಲಲ್ಲಿ ಕಾಣಸಿಗುವ ಈ ಜಲಧಾರೆಗಳು "ಮಳೆಗಾಲದ ಸುಂದರಿಯರು" ಎನ್ನಲಡ್ಡಿಯಿಲ್ಲ. ಹಸಿರು ಬೆಟ್ಟಗಳ ನಡುವೆ ಅಲ್ಲಲ್ಲಿ ಹಾಲ್ನೊರೆಯಂತೆ ಧೋ ಎಂದು ಭೋರ್ಗರೆಯುತ್ತಾ ಧುಮ್ಮಿಕ್ಕುವ ಜಲಧಾರೆಗಳು ಕ್ಷಣದಲ್ಲಿ ಎದುರಾಗಿ ಕಣ್ಮರೆಯಾಗುತ್ತಿದ್ದವು.

ಪ್ರಕ್ರುತಿಯ ಈ ನಯನ ಮನೋಹರ ದ್ರುಶ್ಯಗಳನ್ನು ಕಣ್ತುಂಬಿಕೊಳ್ಳಲೆಂದೇ ಎಡಕುಮೇರಿಯ ಬಳಿ ರೈಲು ಯಾಕೋ ತೀರಾ ನಿಧಾನಗೊಂಡಾಗ ಕೆಳಗಿಳಿದ ಸಹಪ್ರಯಾಣಿಕರಿಬ್ಬರು ಕ್ಯಾಮೆರಾದಲ್ಲಿ ಪ್ರಕ್ರುತಿ ಸೌಂದರ್ಯವನ್ನು ಸೆರೆಹಿಡಿಯುವುದರಲ್ಲಿ ತಲ್ಲೀನರಾಗಿದ್ದರು. ಕೆಲಕ್ಷಣಗಳ ಬಳಿಕ ಮತ್ತೆ ರೈಲು ಹೊರಟಾಗಲೂ ಅವರ ಪತ್ತೆಯಿಲ್ಲ. "ಅಯ್ಯೋ ಅವರಲ್ಲೇ ಬಾಕಿಯಾ?" ಎಂದು ಅವರ ಜೊತೆಗಾರರು ಕೂಗಿಕೊಂಡಾಗ ಕೊನೆಯ ಭೋಗಿಯ ಮೂಲಕ ಒಳಪ್ರವೇಶಿಸಿ ಓಡಿಬರುತ್ತಿದ್ದವರನ್ನು ಕಂಡು ಅಬ್ಬಾ! ಎಂದು ನಿಟ್ಟುಸಿರುಬಿಟ್ಟಿದ್ದರು. ಅಷ್ಟರಲ್ಲಾಗಲೇ ರೈಲು ಬಹಳ ಮುಂದೆ ಸಾಗಿತ್ತು. "ವಡಾ-ಚಾಯ್, ಬಿಸಿ ಬಿಸಿ ಚಾಯ್" ಎಂದು ಕೂಗುತ್ತಾ ವಡೆ ಹಾಗೂ ಚಹಾ ಮಾರುತ್ತಿದ್ದ ಹುಡುಗರು ಬಿಸಿ ಬಿಸಿ ಚಹಾ ನೀಡಿ ಚಳಿ ಓಡಿಸಲು ಸನ್ನಧರಾಗಿದ್ದರು. "ಶಿರಾಡಿಯ ಮಡಿಲಿನಲ್ಲಿ ಪ್ರಕ್ರುತಿಯ ಒಡಲಿನಲ್ಲಿ ಭೋರ್ಗರೆಯುತ ಧುಮ್ಮಿಕ್ಕುವ ಜಲಧಾರೆಯ ನರ್ತನವಿಲ್ಲಿ..." ಎಂದು ಬಿಸಿ ಬಿಸಿ ಚಹಾ ಹೀರುತ್ತಾ ಸಹ ಪ್ರಯಾಣಿಕರೊಬ್ಬರು ಹಾಡಲಾರಂಭಿಸಿದಾಗ ಭೋಗಿಯಲ್ಲಿ ನಗೆಯ ಅಲೆಯೆದ್ದಿತ್ತು. "ಪ್ರಕ್ರುತಿಯ ಸೌಂದರ್ಯ ಕಂಡಾಗ ಎಲ್ಲರೂ ಕವಿಯೇ ಆಗಿಬಿಡುತ್ತಾರೆ ನೋಡಿ" ಎಂದು ಉಲಿದಿದ್ದರು ಮಗದೊಬ್ಬರು!!

ಕಾಮೆಂಟ್‌ಗಳು