ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯೆಲ್ಲಿದೆ? ದಿನೇ ದಿನೇ ಹೆಣ್ಣಿನ ಸ್ಥಿತಿ ಶೋಚನೀಯವಾಗುತ್ತಿದೆ. ಒಂದೆಡೆ ಭ್ರೂಣಹತ್ಯೆಯಿಂದಾಗಿ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಕುಗ್ಗುತ್ತಿದ್ದರೆ ಇನ್ನೊಂದೆಡೆ ’ಅತ್ಯಾಚಾರ’ ಎಂಬ ಅನಾಚಾರವೂ ಆಕೆಯನ್ನು ಜೀವಂತವಾಗಿ ದಹಿಸುತ್ತಿದೆ. ಮೂರು, ನಾಲ್ಕು ವರ್ಷದ ಹೆಣ್ಣುಮಕ್ಕಳಿಂದ ಹಿಡಿದು ಮಹಿಳೆಯರು, ವ್ರುದ್ಧೆಯರೆನ್ನದೆ ಹೆಣ್ಣಿನ ಮೇಲೆ ದೇಶದ ವಿವಿಧೆಡೆಗಳಲ್ಲಿ ಅವ್ಯಾಹತವಾಗಿ ನಡೆಯುವ ಅತ್ಯಾಚಾರದ ಪ್ರಕರಣಗಳ ಬಗ್ಗೆ ಇತ್ತೀಚೆಗೆ ಹೆಚ್ಚಾಗಿ ಕೇಳಿಬರತೊಡಗಿದೆ.
ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಿಂದ ಅಕ್ಷರಶಃ ದೆಹಲಿ ಒಮ್ಮೆ ಹೊತ್ತಿ ಉರಿಯಿತು. ಇದರ ಕಾವಿನ್ನೂ ಆರಿರದ ಸಂದರ್ಭದಲ್ಲಿಯೇ ದೆಹಲಿಯ ಬಾಲ ವಿಹಾರವೊಂದರಲ್ಲಿ ಮೂರು ವರ್ಷದ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ. ಕೆಲ ದಿವಸಗಳ ನಂತರ ಯುವತಿಯೊಬ್ಬಳ ಮೇಲೆ ಅತ್ಯಾಚಾರದ ಯತ್ನ ನಡೆಸಿ ಚಲಿಸುವ ರೈಲಿನಿಂದ ಕೆಳ ತಳ್ಳಿ, ಕೊಲೆ ಮಾಡುವ ಯತ್ನ ನಡೆದಿತ್ತು. ಮಗಳ ಮೇಲೆ ಅತ್ಯಾಚಾರ ನಡೆಸುವ ಅಪ್ಪಂದಿರ ಬಗ್ಗೆ ಪತ್ರಿಕೆಗಳಲ್ಲಿ ದಿನವೂ ವರದಿಯಾಗುತ್ತಲೇ ಇದೆ. ಇಂತಹ ಪ್ರಕರಣಗಳು ನಿರಂತರವಾಗಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳ ಅಂಕಿ-ಸಂಖ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಇವು ಇಂದು ನಮ್ಮ ಸಮಾಜದಲ್ಲಿ ನೈತಿಕ ಮೌಲ್ಯ ಯಾವ ಮಟ್ಟಕ್ಕೆ ಕುಸಿಯುತ್ತಿದೆ ಎಂಬುದನ್ನು ಸೂಚಿಸುತ್ತದೆ.
ನಮ್ಮ ದೇಶವು ಆಧುನಿಕತೆಯತ್ತ ದಾಪುಗಾಲಿಡುತ್ತಿದೆ. ಇಲ್ಲಿ ಮಹಿಳೆಯರು ಸಬಲೆಯರಾಗುತ್ತಿದ್ದಾರೆ ಎಂಬುದು ಎಲ್ಲರ ಭಾವನೆ. ಆದರೆ ಆಕೆಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆ ಆಕೆಯ ಸಾಧನೆಗಳ ಮೇಲೆ ಬರೆ ಎಳೆಯುವ ಯತ್ನವಾಗಿದೆ.
"ಹೆಣ್ಣು ರಾತ್ರಿ ಹೊತ್ತು ಏಕೆ ಓಡಾಡಬೇಕು? ಈ ಮೂಲಕ ಅಕೆಯೇ ತನ್ನ ಮೇಲಿನ ದೌರ್ಜನ್ಯಕ್ಕೆ ಆಹ್ವಾನ ನೀಡುತ್ತಿದ್ದಾಳೆ’ ಎಂದು ನುಡಿದಿರುವ ಸಚಿವರೊಬ್ಬರ ಮಾತು ಅತ್ಯಾಚಾರಕ್ಕೆ ಹೆಣ್ಣೇ ಹೊಣೆ ಎಂಬಂತಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಅತ್ಯಾಚಾರವಾಗುತ್ತದೆ ಎಂದು ಹೆದರಿ ಕುಳಿತ್ತಿದ್ದರೆ ನಮ್ಮ ದೇಶವು ಮಹಿಳಾ ಪ್ರಧಾನಿ, ಮಹಿಳಾ ರಾಷ್ಟ್ರಪತಿ, ಮಹಿಳಾ ಗಗನಯಾತ್ರಿ, ಗಗನಸಖಿಯರು, ವಿಜ್ನ್ಯಾನಿಗಳು, ತಂತ್ರಜ್ನ್ಯರು, ವೈದ್ಯರುಗಳನ್ನು ಕಾಣಲು ಸಾಧ್ಯವಾಗುತ್ತಿತ್ತೇ? ಇದು ಹೆಣ್ಣಿನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನವಲ್ಲವೇ? ಆಕೆ ಪುರುಷರೊಂದಿಗೆ ಯಾವ ಕ್ಷೇತ್ರದಲ್ಲೂ ಪೈಪೋಟಿ ನಡೆಸದಂತೆ ಆಕೆಯ ಉತ್ಸಾಹಕ್ಕೆ ತಣ್ಣೀರೆರಚುವ ಪ್ರಯತ್ನವಲ್ಲವೇ?
ಇನ್ನು ಕೆಲವರು ಹೆಣ್ಣು ತೊಡುವ ಉಡುಪುಗಳೇ ಆಕೆಯ ಮೇಲಿನ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತವೆ ಎನ್ನುತ್ತಾರೆ. ಇಂತಾದರೆ ಮೂರು, ನಾಲ್ಕು ವರ್ಷದ ಏನೂ ಅರಿಯದ ಪುಟ್ಟ ಬಾಲಕಿಯರ ಮೇಲೆರಗುವ ಕೀಚಕರು ನಡೆಸುವ ಕ್ರುತ್ಯಕ್ಕೆ ಯಾವುದು ಪ್ರೇರಣೆಯಾಗಲು ಸಾಧ್ಯ?
ಇಂತಹ ಅಸಮಂಜಸ ಹೇಳಿಕೆಗಳನ್ನು ನೀಡುವ ಬದಲಾಗಿ ಅಮಾನವೀಯ, ಪೈಶಾಚಿಕ ಕ್ರುತ್ಯಗಳನ್ನೆಸಗುವ ನೀಚರಿಗೆ ಶೀಘ್ರವೇ ಕಠಿಣ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ಜಾರಿಗೊಳಿಸಬೇಕು. ಹೆಣ್ಣನ್ನು ಮನೆಯೊಳಗೂ ಬದುಕಲು ಬಿಡದೆ, ಹೊರ ಹೋಗಿಯೂ ದುಡಿಯಲು ಬಿಡದೆ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸುವ ಯತ್ನ ಕೊನೆಯಾಗಲಿ.
ಇಡೀ ವಿಶ್ವದಲ್ಲಿ ಅಮೆರಿಕಾ ಹಾಗೂ ದಕ್ಷಿಣ ಆಫ಼್ರಿಕಾ ದೇಶಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ನಮ್ಮ ಭಾರತದಲ್ಲೇ ಎಂದು ಕೆಲವು ಅಂಕಿ-ಅಂಶಗಳು ಸಾರುತ್ತವೆ. ಇದಕ್ಕೆ ಕಡಿವಾಣ ಹಾಕುವ ಯತ್ನವಾಗಬೇಕು. ಅತ್ಯಾಚಾರಕ್ಕೊಳಪಟ್ಟ ಹೆಣ್ಣುಮಕ್ಕಳು ನಿಸ್ಸಂಕೋಚವಾಗಿ ಪೋಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸುವ ಅಭಯ ಪರಿಸ್ಥಿತಿ ನಿರ್ಮಾಣವಾಗಲಿ. "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ" ಎನ್ನುತ್ತಾ ಹೆಣ್ಣಿಗೆ ಪೂಜ್ಯ ಸ್ಥಾನ ನಿಡಿದ ದೇಶ ನಮ್ಮದು. ಅಂತಹ ಪವಿತ್ರ ನಾಡಿನಲ್ಲೇ ಇಂದು ಹೆಣ್ಣನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ. ಹೆಣ್ಣನ್ನು ಕೇವಲ ಭೋಗದ ವಸ್ತುವೆಂಬಂತೆ ನೋಡುವ ಸಮಾಜದ ದ್ರುಷ್ಟಿಕೋನ ಬದಲಾಗಬೇಕು. ಆಕೆಯ ಮೇಲೆ ಎಗಿಲ್ಲದೇ ನಡೆಯುವ ದೌರ್ಜನ್ಯಗಳಿಗೆ ಅಂತ್ಯ ಹಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಆಗ "ಹೆಣ್ಣು ಮಕ್ಕಳ ದಿನ" ,"ಮಹಿಳಾ ದೌರ್ಜನ್ಯ ವಿರೋಧೀ ದಿನ", "ಮಹಿಳಾ ಅಂತರಾಷ್ಟ್ರೀಯ ದಿನ"ದಂತಹ ಮಹಿಳಾ ದಿನಾಚರಣೆಗಳಿಗೂ ಒಂದು ಅರ್ಥ ಬಂದೀತು.
copyright2015geethabarlaamai
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ